

ಗದಗ: ನಾಡಿನ ಸಂಸ್ಕೃತಿ, ಕಲೆ, ನೃತ್ಯ, ಸಂಗೀತ, ಶಿಲ್ಪಕಲೆ ಮಹಿಳೆಯಿಂದಾಗಿಯೇ ಉಳಿದಿದೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವ ಹಾಗೆ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದನ್ನು ನಾರಿಯರು ಸಾಬೀತುಪಡಿಸಿದ್ದಾರೆ ಎಂದು ಎಂ. ಜಿಲ್ಲಾಧಿಕಾರಿ ಸುಂದರೇಶಬಾಬು ಹೇಳಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯ ವಿಶ್ವನಾಥ ರಾಮಚಂದ್ರಪ್ಪ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ನ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಉತ್ಸವ-2021 ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರ್ಮನ್ ಆನಂದ ಪೋತ್ನಿಸ್ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಹೀಗಾಗಿ ಇನ್ನೂ ಹೆಚ್ಚು ಅವಕಾಶಗಳನ್ನು ನೀಡಿ ದೇಶವನ್ನು ಮುನ್ನಡೆಸಬೇಕು ಎಂದರು.
ವೇದಿಕೆ ಮೇಲೆ ಡಾ. ನೂರಾನಿ, ಪ್ರಾಚಾರ್ಯ ಐ.ವಿ. ಬೆಳ್ಳಿಕಟ್ಟಿ, ಪ್ರೊ.ಎಸ್.ಎಂ. ಬೆಲ್ಗಾಮ್ ಪ್ರೊ. ದಲಬಂಜನ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ 40 ವರ್ಷಗಳ ಕಾಲ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದೆ ವಿದ್ಯಾ ಅವರನ್ನು ಗೌರವಿಸಲಾಯಿತು.
ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ರಂಗೋಲಿ ಚಿತ್ರಕಲೆ, ಮೆಹೆಂದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಒಟ್ಟು 23 ಮಹಿಳಾ ತಂಡಗಳು ಜನಪದ ನೃತ್ಯ, ಪಟಕುಣಿತ, ಚೌಡಕಿಪದ, ಪೂಜಾ ಕುಣಿತ, ರಂಗಗೀತೆ, ಶಾಸ್ತ್ರೀಯ ನೃತ್ಯ ಹಾಗೂ ನಾಟಕ ಕಾರ್ಯಕ್ರಮಗಳ ಜರುಗಿದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ವಿ.ಬಿ. ಗವಾಯಿ, ಪಿ.ಆರ್. ಇನಾಮದಾರ, ಕೆ.ಗಿರಿರಾಜ, ಎಸ್.ಪಿ. ಜಾಧವ, ರವೀಶ, ಶ್ರೀಕಾಂತ, ಪ್ರಾಣೇಶ ಬೆಳ್ಳಟ್ಟಿ, ಎಸ್.ಎಚ್. ಕಲ್ಗುಡಿ, ಆದಿತ್ಯ ಜೋಶಿ, ಬಸವರಾಜ.ಟಿ. ಪಿ., ಅಕ್ಷತಾ ಶೇಟ್, ನಂದಾ ಹಿರೇಮಠ ಮತ್ತಿತರರು ಇದ್ದರು.
EndFragment