

ಮೈಸೂರು: ಮಹಿಳೆಯರಿಗೆ ಸಮಾನ ಹಕ್ಕುಗಳು, ಸಮಾನ ಅವಕಾಶ ಮತ್ತು ಸೌಲಭ್ಯಗಳು ಸಿಗಬೇಕು ಎಂದು ಅಂತರಧ್ವನಿ ಸಂಸ್ಥಾಪಕ, ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಅಜಯ್‌ಕುಮಾರ್ ಹೇಳಿದರು.
ಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್‌ಮೆಂಟ್ ಆ್ಯಂಡ್ ಅಪ್ಲಿಫ್ಟ್‌ಮೆಂಟ್ ಅಕಾಡೆಮಿ (ಐಎಚ್‌ಡಿಯುಎ) ವತಿಯಿಂದ ನಗರದ ಮುಕ್ತಗಂಗೋತ್ರಿಯಲ್ಲಿರುವ ಘಟಿಕೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರಧ್ವನಿ ನಾಯಕತ್ವ ಸಮ್ಮೇಳನದಲ್ಲಿ ಮಾತನಾಡಿದರು.
ಹೆಚ್ಚು ಸಾಮರ್ಥ್ಯ ಮತ್ತು ಶಕ್ತಿ ಹೊಂದಿರುವ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು. ಆದರೆ, ಪುರುಷ ಪ್ರಧಾನ ಸಮಾಜವಾಗಿರುವುದರಿಂದ ಅವರಿಗೆ ಹಕ್ಕುಗಳನ್ನು ನೀಡುತ್ತಿಲ್ಲ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶದಲ್ಲಿ ಎಲ್ಲರೂ ಸಮಾನರು ಮತ್ತು ಸಮಾನವಾಗಿ ಕಾಣಬೇಕು ಎಂದರು.
ಯಾವುದೇ ಧರ್ಮದಲ್ಲಿ ತಾರತಮ್ಯ ಮಾಡಬಾರದು. ಭಾರತೀಯ ಸಂವಿಧಾನದ ಪ್ರಕಾರ, ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತರಿಗೆ ಭದ್ರತೆ ನೀಡಬೇಕಾಗಿದೆ ಎಂದು ತಿಳಿಸಿದರು.
2022ರ ದೆಹಲಿಯಲ್ಲಿ ನಡೆದ ಆರ್-ಡೇ ಪರೇಡ್ ಎನ್‌ಸಿಸಿ ಮಾಚಿರ್ಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ ಪ್ರಮೀಳಾ ಕುನ್ವರ್ ಮಾತನಾಡಿ, ಪ್ರತಿ ಕಠಿಣ ಪರಿಶ್ರಮಕ್ಕೂ ಪ್ರತಿಫಲವಿದೆ ಎಂದರು.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಕೆ ಸ್ವಚ್ಛ ಸರ್ವೇಕ್ಷಣ್ 2023ರ ರಾಯಬಾರಿ ಫಾಲ್ಕಿಯಾ ಖಾನ್, ಭಾರತ ಸರ್ಕಾರದ ಮಾಜಿ ಜಂಟಿ ಕಾರ್ಯದರ್ಶಿ ರವಿ ಜೋಶಿ ಮಾತನಾಡಿದರು.
ಮೈಸೂರಿನ ಸೈಬರ್ ಕ್ರೈಂನ ಎಸ್.ಲಿಂಗರಾಜು ಅವರು ಸೈಬರ್ ಅಪರಾಧ ಮತ್ತು ನಕಲಿ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿವಿಧ ಶಾಲಾ-ಕಾಲೇಜುಗಳ ಸುಮಾರು 1500 ವಿದ್ಯಾರ್ಥಿಗಳು ಮತ್ತು ಗುಂಡ್ಲುಪೇಟೆಯ ಗ್ರಾಮೀಣ ಪ್ರದೇಶದ 400 ಮಹಿಳೆಯರು ಭಾಗವಹಿಸಿದ್ದರು.