

ತಿ.ನರಸೀಪುರ: ಮಹಿಳೆಯ ಪರಿಪೂರ್ಣ ಬೆಳವಣಿಗೆಯಿಂದ ಸಮಾಜವೇ ಬೆಳೆಯುತ್ತದೆ. ಮಹಿಳೆಯರು ಅವಲಂಬಿತರಾಗದೆ ಸ್ವತಂತ್ರವಾಗಿ ಜೀವನ ಸಾಗಿಸುವಂತಾಗಬೇಕು ಎಂದು ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಡಾ.ರೇಷ್ಮಾ ಚಂಗಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಸಮಿತಿ, ಸಾಂಸ್ಕೃತಿಕ ವೇದಿಕೆ ಮತ್ತು ಐಕ್ಯುಎಸಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ರಾಜಕೀಯ, ಉದ್ಯಮ ಮತ್ತು ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಅಲ್ಲದೆ ಆಗಿಂದಾಗ್ಗೆ ಜಾಗೃತರಾಗಿ ಸಮಾನತೆಯ ಅವಕಾಶವನ್ನು ತಲುಪಬೇಕು. ಹೆಣ್ಣಿನ ಬಗೆಗಿನ ಪ್ರತಿಯೊಬ್ಬರ ಮನಸ್ಥಿತಿಯೂ ಬದಲಾಗಬೇಕಾಗಿದೆ ಎಂದರು.
ಮಹಿಳೆಯ ಮೇಲೆ ನಡೆಯುವ ಹಿಂಸೆ, ಅನ್ಯಾಯದ ವ್ಯತ್ಯಾಸ, ನಾಯಕತ್ವದ ಅಭಾವ ಮತ್ತು ಲಿಂಗಭೇದವನ್ನು ತೊಡೆದು ಹಾಕಲು ತ್ವರಿತ ಕ್ರಮ ಕೈಗೊಳ್ಳಬೇಕು. ನಾವು ಭವಿಷ್ಯವನ್ನು ನೋಡುವಾಗ ಪ್ರತಿಯೊಬ್ಬ ಮಹಿಳೆಯಲ್ಲಿಯೂ ತನ್ನ ಕನಸುಗಳನ್ನು ನನಸು ಮಾಡಬಹುದು ಎಂಬ ಆತ್ಮವಿಶ್ವಾಸವಿರಬೇಕು. ಭರವಸೆಯ ಬದುಕು ನೀತಿಯ ರೂಪದಲ್ಲಿದ್ದರೆ ಸಾಲದು. ಪ್ರತಿದಿನವೂ ಮಹಿಳಾ ಸಮಾನತೆಗೆ ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಕಲಾಶ್ರೀ ಮಾತನಾಡಿ, ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವನ್ನು ನೈಜೀರಿಯಾದ ಸ್ತ್ರೀವಾದಿ ಲೇಖಕಿ ಚಿಮಮಾಂಡ ಎನ್.ಗೋಜಿ ಅಡಿಚಿಯೆ ತಮ್ಮ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯಲ್ಲಿ ಸಲಹೆಗಳನ್ನು ನೀಡಿದ್ದಾರೆ. ನೈಜೀರಿಯಾದ ರಾಷ್ಟೀಯ ಐಕಾನ್ ಆಗಿರುವ ಅವರು ಸ್ತ್ರೀವಾದದ ಮೂಲತತ್ತ್ವ ನಾನು ಮುಖ್ಯ ಎಂದಾಗಬೇಕು ಎನ್ನುತ್ತಾರೆ. ನಿನಗೆ ಏನು ಬೇಕು ಎಂಬ ಅರಿವು ನಿನಗೆ ಸ್ಪಷ್ಟವಾಗಿರಬೇಕು, ಬದಲಿಗೆ ಅನ್ಯರು ನಿನ್ನ ಬದುಕನ್ನು ರೂಪಿಸಲು ಅವಕಾಶ ನೀಡಬಾರದು. ನಿನಗಾಗಿ ಸಮಯ ಮೀಸಲಿಡು, ನಿನ್ನ ಅಗತ್ಯಗಳು ನಿನ್ನ ಮೊದಲ ಆದ್ಯತೆಯಾಗಿರಲಿ ಎಂದು ಹೆಣ್ಣುಮಕ್ಕಳ ಬದುಕಿನ ಸುಧಾರಣೆಗಾಗಿ ಅನೇಕ ಮೌಲ್ಯಯುತ ಸಲಹೆಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಿ.ಎಸ್.ದೇವರಾಜೇಗೌಡ ಹಾಗೂ ಐಕ್ಯುಎಸಿ ಸಂಚಾಲಕ ಡಾ.ಅಮಿತ್ ಮಾತನಾಡಿದರು. ಪ್ರಾಂಶುಪಾಲ ಡಾ.ಎಚ್.ವಿ.ಉದಯ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿ ದೇವಯಾನಿ, ಅಂತಿಮ ಬಿ.ಎ ವಿದ್ಯಾರ್ಥಿನಿ ಮಾದಲಾಂಬಿಕ, ಬಿ.ಕಾಂ ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.