

ಸಾಲಿಗ್ರಾಮ: ಮಹಿಳೆಯರು ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ವೇತಾ ತಿಳಿಸಿದರು.
ತಾಲೂಕಿನ ಭೇರ್ಯ ಗ್ರಾಮದ ವಾಲ್ಮೀಕಿ ಭವನದಲ್ಲಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಉದ್ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಈಗಾಗಲೇ ಸಾಕಷ್ಟು ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಅಂತಹ ಮಹಿಳೆಯರಲ್ಲಿ ಬಹುತೇಕರು ಸ್ವ ಉದ್ಯೋಗ ಮಾಡಿಕೊಂಡೇ ಸಾಧನೆ ಮಾಡುತ್ತಿದ್ದಾರೆ. ಆ ಸಾಧನೆ ಹಿಂದೆ ಸಾಕಷ್ಟು ಶ್ರಮವಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆರ್ಥಿಕವಾಗಿ ಸಾಲಸೌಲಭ್ಯ ಒದಗಿಸಲು ನಿಮ್ಮ ಜತೆ ಇದೆ. ಹಾಗಾಗಿ ನೀವು ಮನಸ್ಸು ಮಾಡಿದರೆ ಸಾಧನೆ ಬಹುದೊಡ್ಡ ವಿಷಯವಲ್ಲ ಎಂದರು.
ಕುಟುಂಬದಲ್ಲಿ ದಿನನಿತ್ಯ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಕುಟುಂಬದ ನಿರ್ವಹಣೆಗೆಂದು ಸ್ವಂತ ಉದ್ಯೋಗ ಕಲ್ಪಿಸಿಕೊಂಡರೆ ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದರು.
ಸಂಸ್ಥೆಯ ಮೇಲ್ವಿಚಾರಕಿ ಪವಿತ್ರಾ ಮಾತನಾಡಿ, ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಧರ್ಮಸ್ಥಳ ಯೋಜನೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಇವುಗಳ ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಜ್ಞಾನವಿಕಾಸ ಕೇಂದ್ರದ ತಾಲೂಕು ಸಮನ್ವಯ ಅಧಿಕಾರಿ ಉಷಾ, ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಭೇರ್ಯ ಸಿ.ಸಿ. ಮಹದೇವ್, ನಿರ್ದೇಶಕ ಉದ್ದೇಶನಾಯಕ, ಸೇವಾ ಪ್ರತಿನಿಧಿ ಕರಿಯಮ್ಮ, ಗೌರಿ, ಆಶಾ ಕಾರ್ಯಕರ್ತೆಯರು, ಸಂಘಗಳ ಸದಸ್ಯರು, ಪ್ರತಿನಿಧಿಗಳು ಇದ್ದರು.