

ಬೇಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಮಹಿಳೆಯರ ಜೀವನಮಟ್ಟ ಸುಧಾರಣೆ, ಆರ್ಥಿಕ ಅಭಿವೃದ್ಧಿಗಾಗಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಮಹಿಳೆಯರು ಯೋಜನೆಯ ಲಾಭ ಪಡೆಯಬೇಕೆಂದು ನಾರ್ವೆ ಪೇಟೆ ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ ಹೇಳಿದರು.
ತಾಲೂಕಿನ ನಾರ್ವೆ ಪೇಟೆಯ ಸಂತೆ ಆವರಣ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಂಜೀವಿನಿ ಗ್ರಾಮೀಣ ಸಂವರ್ಧನೆ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸ್ವ-ಸಹಾಯ ಸಂಘದ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಕಸುಬು ಆಧಾರಿತ ಸ್ವಾವಲಂಬಿ ಜೀವನ ಕಂಡು ಕೊಂಡಿದ್ದಾರೆ. ಮನೆಯಲ್ಲಿಯೇ ತಯಾರಿಸಿರುವ ವಿವಿಧ ರೀತಿಯ ದಿನ ಬಳಕೆ ವಸ್ತುಗಳ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವುದು ತಮ್ಮ ಬದುಕಿನ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರೊಂದಿಗೆ ಸರ್ಕಾರದಿಂದ ಸಿಗುವ ಸಾಲ-ಸೌಲಭ್ಯ ಬಳಸಿಕೊಂಡು ಇನ್ನೂ ಎತ್ತರಕ್ಕೆ ಬೆಳೆಯಲು ಮಹಿಳೆಯರು ಮುಂದಾಗಬೇಕು ಎಂದರು.
ಸಂಜೀವಿನಿ ಗ್ರಾಮೀಣ ಸಂವರ್ಧನೆ ಸಂಸ್ಥೆಯ ವ್ಯವಸ್ಥಾಪಕಿ ಎಂ.ಸಿ.ದಾಕ್ಷಾಯಿಣಿ ದಿನೇಶ್ ಮಾತನಾಡಿ, ಈ ಯೋಜನೆಯಲ್ಲಿ ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಂಸ್ಥೆಯಿಂದ ಈಗಾಗಲೇ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸ್ವ ಸಹಾಯ ಸಂಘಗಳ ಸದಸ್ಯರುಗಳಿಗೆ ಕಸುಬು ಆಧಾರಿತ ಯೋಜನೆಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಯೋಜನೆಯ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು
ಈ ಸಂದರ್ಭ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸಿದ್ದ ವಿವಿಧ ರೀತಿಯ ದಿನ ಬಳಕೆ ವಸ್ತುಗಳನ್ನು ಸಂತೆಯಲ್ಲಿ ವ್ಯಾಪಾರ-ವಹಿವಾಟು ನಡೆಸುವ ಮೂಲಕ ಮಾಸಿಕ ಸಂತೆಯನ್ನು ಯಶಸ್ವಿಗೊಳಿಸಿದರು.
ನಾರ್ವೆ ಪೇಟೆ ಗ್ರಾಪಂ ಉಪಾಧ್ಯಕ್ಷ ಸುಲಗಳಲೆ ಮಲ್ಲಿಕಾರ್ಜುನ್, ಸದಸ್ಯರಾದ ಬೇಬಿ ಪ್ರಕಾಶ್, ಮಲ್ಲಿಕಾರ್ಜುನ, ಕಾರ್ಯದರ್ಶಿ ಚಾಮರಾಜು, ಎಂಬಿಕೆ ಸದಸ್ಯರಾದ ಗೀತಾ, ಕವಿತಾ, ಜ್ಯೋತಿ ಸೇರಿದಂತೆ ಇತರರಿದ್ದರು.