ಸುಸಜ್ಜಿತ ಮನೆಗಳು ನಿರ್ಮಾಣವಾಗಲಿ

ಮಲೆಮಹದೇಶ್ವರ ಬೆಟ್ಟ ಸಮೀಪದ ಆಣೆಹೊಲ ಬುಡಕಟ್ಟು ಗ್ರಾಮದಲ್ಲಿ ಸಿದ್ದು ನಿವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮಾದರಿ ಮನೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಪರಿಶೀಲಿಸಿದರು. ಮಂಜುಳಾ, ಬಿಂದ್ಯಾ, ರವಿಕುಮಾರ್ ಇತರರು ಇದ್ದರು.
ಮಲೆಮಹದೇಶ್ವರ ಬೆಟ್ಟ ಸಮೀಪದ ಆಣೆಹೊಲ ಬುಡಕಟ್ಟು ಗ್ರಾಮದಲ್ಲಿ ಸಿದ್ದು ನಿವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮಾದರಿ ಮನೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಪರಿಶೀಲಿಸಿದರು. ಮಂಜುಳಾ, ಬಿಂದ್ಯಾ, ರವಿಕುಮಾರ್ ಇತರರು ಇದ್ದರು.
Published on

ಹನೂರು: ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಅಗತ್ಯ ಮೂಲ ಸೌಕರ್ಯದೊಂದಿಗೆ ಮನೆಗಳು ಸುಸಜ್ಜಿತವಾಗಿ ನಿರ್ಮಾಣವಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಆಣೆಹೊಲ ಗ್ರಾಮದಲ್ಲಿ ಬುಡಕಟ್ಟು ಜನರಿಗೆ ವಸತಿ ಸೌಕರ್ಯವನ್ನು ಕಲ್ಪಿಸುವ ಸಲುವಾಗಿ ಸಿದ್ದು ನಿವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮಾದರಿ ಮನೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.

ಈ ವೇಳೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ವಾಸಿ ಹಾಗೂ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದು, ವಸತಿ ಸೌಕರ್ಯದ ಸಮಸ್ಯೆ ಇತ್ತು. ಈ ಹಿನ್ನೆಲೆ ಸಿದ್ದು ನಿವಾಸ್ ಯೋಜನೆಯಡಿ ಮನೆ ನಿರ್ಮಿಸುವ ಸಂಬಂಧ ಜಿಲ್ಲೆಯಲ್ಲಿ 2,995 ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂ. ವೆಚ್ಚದಲ್ಲಿನ ಮನೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಆಣೆಹೊಲ ಬುಡಕಟ್ಟು ಕಾಲನಿಯಲ್ಲಿ ಕಾವೇರಿ ಎಂಬ ಫಲಾನುಭವಿ ಹೆಸರಿನಲ್ಲಿ ಮಾದರಿ ಮನೆಯನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆರ್ಹ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು. ಮನೆ ನಿರ್ಮಾಣ ಕಾಮಗಾರಿ ಸಂಬಂಧ ಅಧಿಕಾರಿಗಳು ಹೆಚ್ಚಿನ ಮುತುರ್ವಜಿ ವಹಿಸಬೇಕು. ಶೌಚಗೃಹ ಹಾಗೂ ಇನ್ನಿತರೆ ಅಗತ್ಯ ಮೂಲ ಸೌಕರ್ಯ ಒಳಗೊಂಡಂತೆ ಮನೆಯು ಸುಸಜ್ಜಿತವಾಗಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಬುಡಕಟ್ಟು ಸಮುದಾಯದ ಮಗುವನ್ನು ಎತ್ತಿಕೊಂಡು ಆರೋಗ್ಯ ಯೋಗಕ್ಷೇಮ ವಿಚಾರಿಸಿದರು. ಮನೆ ನಿರ್ಮಾಣದ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು.

ಇದಕ್ಕೂ ಮುನ್ನಾ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕಿ ಮಂಜುಳಾ, ಎಇಇ ರವಿಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಚಂದ್ರಶೇಖರ್, ಇಂಜಿನಿಯರ್ ಸೆಲ್ವ ಗಣಪತಿ, ದೇಗುಲದ ಪಾರುಪತ್ತೆಗಾರ ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net