

ಬಾಗಲಕೋಟೆ: ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಬೋರ್ಡ್ಗೆ ತಿದ್ದುಪಡಿ ತರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ನಾನು ಬರೀ ತಿದ್ದುಪಡಿಯಲ್ಲ, ವಕ್ಫ್ ಬೋರ್ಡ್ನ್ನೇ ರದ್ದು ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದ್ದಾರೆ.
ಬಾಗಲಕೋಟೆಯ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ತುಂಬ ವಕ್ಫ್ ಬೋರ್ಡ್ ಯಾರದೋ ಆಸ್ತಿಯನ್ನು ನಮ್ಮ ಆಸ್ತಿ ಎಂದು ನೋಟಿಸ್ ಕೊಡಲು ಆರಂಭಿಸಿದೆ. ಇದು ಬರೀ ವಿಜಯಪುರದಲ್ಲಿ ತಲೆ ಎತ್ತಿರುವ ಸಮಸ್ಯೆಯಲ್ಲ ಎಂದು ತಿಳಿಸಿದರು.
ಈ ದೇಶದಲ್ಲಿ ವಕ್ಫ್ ಬೋರ್ಡ್ ಅವಶ್ಯಕತೆಯೇ ಇಲ್ಲ. ಅವರಿಗೆ ಮಾತ್ರ ವಿಶೇಷವಾದ ಸೌಲಭ್ಯ ಏಕೆ? ಇವರು ಎಲ್ಲಾದರೂ ಹೋಗಿ ಇದು ನಮ್ಮ ಆಸ್ತಿ ಎಂದು ಚೀಟಿ ಹಚ್ಚಿದರೆ ಅದು ಅವರ ಆಸ್ತಿನಾ ? ಈಗ ರೈತರ ಹೊಲಗಳಿಗೆ ಶುರು ಹಚ್ಚಿದ್ದಾರೆ. ಅಜ್ಜ, ಮುತ್ತಜ್ಜನ ಕಾಲದಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನುಗಳು ವಕ್ಫ್ ಬೋರ್ಡ್ನದ್ದು ಎಂದು ಹೇಗೆ ಹೇಳುತ್ತಾರೆ? ಆ ಜಮೀರ್ ಅಹ್ಮದ್ ವಿಜಯಪುರಕ್ಕೆ ಹೋಗಿ ಬಂದ ಬಳಿಕ ಇದು ಚಾಲೂ ಆಗಿದೆ. ಇದೆಲ್ಲ ಅವನದ್ದೇ ಉಪದ್ಯಾಪಿತನ. ಅವನ ಭಾಷೆ ನೋಡಿದರೆ ಯಾವತ್ತೂ ಸರಳ ಭಾಷೆಯಲ್ಲಿ ಮಾತನಾಡಲ್ಲ. ಹಿಂದುಗಳ ಮೇಲೆ ಕೆಂಡಕಾರುತ್ತಾನೆ. ಜಮೀರ್ ಅತ್ಯಂತ ಕೋಮುವಾದಿ. ಕಾಂಗ್ರೆಸ್ನವರು ಅವನನ್ನು ಯಂತ್ರಣ ಮಾಡಬೇಕೋ ಬೇಡವೋ ಎಂದು ಜಮೀರ್ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗೆ ಇಳಿಯುವಾಗ ವಕ್ಫ್ ಬೋರ್ಡ್ ಪರವಾದ ಕಾನೂನಿಗೆ ಸಹಿ ಮಾಡಿ ಹೋದ ಪರಿಣಾಮವನ್ನು ಈಗ ಎಲ್ಲರೂ ಅನುಭವಿಸುವಂತಾಗಿದೆ. ಈಗ ಎಲ್ಲಿ ಹೋದಲ್ಲಿ ಈ ಜಾಗ ನಮ್ಮದೇ ಎಂದು ಹೇಳುತ್ತಿದ್ದಾರೆ. ಇದು ವಕ್ಫ್ಗೆ ಸಂಬಂಧಪಟ್ಟಿದ್ದು ಎಂದು ನೋಟಿಸ್ ಕೊಟ್ಟರೆ 20 ದಿನಗಳಲ್ಲಿ ಖಾಲಿ ಮಾಡಬೇಕು ಎನ್ನುತ್ತಾರೆ.
ಇವರೇನು ಕೋರ್ಟಾ? ಇದಕ್ಕೆ ಬೆಂಬಲ ಕೊಡುವ ಕೆಲ ನಾಲಾಯಕ ಹಿಂದುಗಳು ಕೂಡ ಇದ್ದಾರೆ ಎಂದು ಕಿಡಿಕಾರಿದರು.
ವಕ್ಫ್ ಬೋರ್ಡ್ ನಡೆಯಿಂದ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಗುಡಿ ಗುಂಡಾರಗಳೆಲ್ಲ ನಮ್ಮದೇ ಎನ್ನುತ್ತಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ವಕ್ಫ್ ಬೋರ್ಡ್ ಆಗಿದೆ. ಮುಸ್ಲಿಮರನ್ನು ಓಲೈಸುವ ಏಕೈಕ ಕಾರಣಕ್ಕೆ ಬೋರ್ಡ್ ಮಾಡಿಟ್ಟಿದ್ದಾರೆ. ನಾಳೆ ಅವರಿಗೂ ಇದು ಮುಳ್ಳಾಗುತ್ತದೆ. ಅವರು ಹೇಳಿದಂತೆ ಕೇಳಬೇಕು. ಕೋರ್ಟ್ಗೂ ಹೋಗುವಂತಿಲ್ಲ. ಇದೆಂಥ ಕಾನೂನು? ಯಾವುದನ್ನೂ ಚಾಲೆಂಜ್ ಮಾಡಲು ಆಗದಿದ್ದರೆ ಏನರ್ಥ ಎಂದು ಪ್ರಶ್ನಿಸಿದರು.
ಇವತ್ತು ವಿವಿಧೆಡೆ ಹಿಂದುಗಳ ಮೇಲೆ ಅನ್ಯಾಯ ಆಗುತ್ತಿದೆ. ಇದರ ಬಗ್ಗೆ ಒಬ್ಬ ಮುಸಲ್ಮಾನನಾದರೂ ಮಾತನಾಡಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.