

ಮೈಸೂರು: ಹೆಸರು, ಕೀರ್ತಿ ಪಡೆಯಲು ಶ್ರಮ ಹಾಕಿದಂತೆ, ಅದನ್ನು ಪಡೆದ ಬಳಿಕ ಅರಗಿಸಿಕೊಳ್ಳುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು ಎಂಬ ವಿಷಯಕ್ಕೆ ವಿವೇಕಾನಂದರ ಬದುಕು ನಿದರ್ಶನ ಎಂದು ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ಹೇಳಿದರು.
ಕರ್ನಾಟಕ ಸರ್ಕಾರದ ಆಯುಷ್ ನಿರ್ದೇಶನಾಲಯ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಸುವರ್ಣ ಧ್ಯಾನ ಯುವ ಮಹೋತ್ಸವ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವೇಕಾನಂದರು ಸಾರ್ವಜನಿಕ ಜೀವನದಲ್ಲಿ ಬದುಕಿದ್ದು ಕೆಲವೇ ವರ್ಷವಾದರೂ ಅಷ್ಟು ಸಣ್ಣ ಅವಧಿಯಲ್ಲಿ ಸಾವಿರಾರು ವರ್ಷಗಳ ಕಾಲ ಲೋಕ ಅನುಸರಿಸಬೇಕಾದ ವಿಚಾರಗಳನ್ನು ತಿಳಿಸಿದ್ದರು. ಹೆಸರು, ಕೀರ್ತಿ ಪಡೆಯಲು ಶ್ರಮ ಹಾಕಿದಂತೆ, ಅದನ್ನು ಪಡೆದ ಬಳಿಕ ಅರಗಿಸಿಕೊಳ್ಳುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು ಎಂಬ ವಿಷಯಕ್ಕೆ ಅವರ ಬದುಕು ನಿದರ್ಶನವಾಗುತ್ತದೆ ಎಂದರು.
ತಪಸ್ಸು ಮಾಡಿ ಸಾಧನೆ ಮಾಡಲು ಹಿಮಾಲಯ ಏರಬೇಕಾಗಿಲ್ಲ. ವಿದ್ಯಾರ್ಥಿ ಜೀವನವನ್ನೇ ತಪಸ್ಸಿನಂತೆ ಅನುಸರಿಸಿದಾಗ ವ್ಯಕ್ತಿ ಮೌಲ್ಯ ಹೆಚ್ಚುತ್ತದೆ. ಹೃದಯ, ಮಿದುಳು ಹಾಗೂ ಹಸ್ತ ಪರಿಪೂರ್ಣ ಬೆಳವಣಿಗೆಯಾದಾಗ ಜೀವನದ ಮೌಲ್ಯಗಳು ಅರ್ಥವಾಗುತ್ತವೆ ಎಂದರು.
ಜಗತ್ತಿನ ಸಂಪತ್ತನ್ನು ಕ್ರೋಢೀಕರಿಸಿದರೆ ದೇಶದ ಎರಡು ಹಳ್ಳಿಗಳನ್ನಷ್ಟೇ ಅಭಿವೃದ್ಧಿಗೊಳಿಸಲು ಸಾಧ್ಯ. ಆದರೆ ವ್ಯಕ್ತಿಗೆ ತನ್ನ ಕಾಲ ಮೇಲೆ ನಿಂತು ಸಾಧಿಸುವುದನ್ನು ಹೇಳಿಕೊಟ್ಟರೆ ಎಲ್ಲ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ವಿವೇಕಾನಂದರು ಹೇಳಿದ್ದರು. ಈ ವಿಚಾರವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮೂಹ ಅಳವಡಿಸಿಕೊಳ್ಳಬೇಕು. ಪರಿಶ್ರಮದಿಂದ ಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ ಎಂದು ವಿವರಿಸಿದರು.
ಭಾರತವನ್ನು ಅರಿಯಲು ವಿವೇಕಾನಂದರನ್ನು ಅಧ್ಯಯನ ಮಾಡಬೇಕು ಎಂದು ರವೀಂದ್ರನಾಥ ಠಾಗೋರ್ ಹೇಳಿದ್ದಾರೆ. ಪುಸ್ತಕದ ಓದಷ್ಟೇ ಶಿಕ್ಷಣವಲ್ಲ ಎಂಬ ಸತ್ಯವನ್ನು ಅರಿತು, ಆಧ್ಯಾತ್ಮಿಕ ಹಾಗೂ ದಿನನಿತ್ಯದ ವಿಚಾರಗಳಿಂದಲೂ ಪಾಠ ಕಲಿಯಬೇಕು. ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಆತ್ಮಸ್ಥೈರ್ಯದ ಕೊರತೆ ಎದ್ದು ಕಾಣುತ್ತಿದೆ. ತಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ಆತಂಕದಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ಅರ್ಕಧಾಮ ಸಂಸ್ಥಾಪಕ ಶ್ರೀನಿವಾಸ ಅರ್ಕ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಜಿಎನ್‌ಸಿವೈಎಂಸಿ ಪ್ರಾಂಶುಪಾಲೆ ಡಾ.ಆರ್.ಸಿ.ಮೈತ್ರಿ, ಜಿಎಸ್‌ಎಸ್ ಸಂಸ್ಥೆಯ ಡಿ.ಶ್ರೀಹರಿ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀ ನಾರಾಯಣ ಶೆಣೈ, ಆಯೋಜಕ ಪ್ರೊ.ಅಂಥೋಣಿ ಇತರರು ಇದ್ದರು.