

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅಕ್ರಮ ನಡೆದಿದೆ ಎಂದು ಯಾವುದೇ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪ ಮಾಡಿದ್ದು, ಅವರು ಇನ್ನಾದರೂ ದಾಖಲೆ ನೋಡಿ ಮಾತನಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ವಿಶ್ವನಾಥ್ ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಅವರಿಗೆ ತಲೆ ಕೆಟ್ಟಿದೆ ಅನ್ಸುತ್ತೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಗರಣದ ವಿಚಾರದಲ್ಲಿ ‘ಹಿಟ್ ಆ್ಯಂಡ್ ರನ್ ಕೇಸ್’ ಮಾಡುವುದು ಸರಿಯಲ್ಲ. ನಿಮಗೆ ಮಾತನಾಡುವ ಹಕ್ಕಿದೆ. ಆದರೆ, ಆದರೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾರ್ವತಿ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ದಾಖಲೆಗಳನ್ನು ನೀಡುತ್ತೇವೆ, ಆ ದಾಖಲೆಗಳನ್ನು ನೋಡಿ ಮಾತ ನಾಡಿ. ಸುಖ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಮುಡಾದಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ಅಕ್ರಮ ನಡೆದಿದ್ದು, ಆ ಅಕ್ರಮದ ಕುರಿತು ತನಿಖೆ ನಡೆಸಲು ಸರ್ಕಾರ ಉನ್ನತ ಮಟ್ಟದ ತನಿಖಾ ತಂಡ ರಚಿಸಿದೆ ಎಂದರು.
ನಗರದ ಕೆಸರೆಯ ಸರ್ವೇ ನಂ.464ರಲ್ಲಿ 3.14 ಎಕರೆ ಜಮೀನು ಮಲ್ಲಿಕಾರ್ಜುನ ಸ್ವಾಮಿ ಎಂಬ ವ್ಯಕ್ತಿಗೆ ಸೇರಿತ್ತು. ಮಲ್ಲಿಕಾರ್ಜುನ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ. ಈ 3.14 ಎಕರೆ ಜಮೀನನ್ನು 1997ರಲ್ಲಿ ಮುಡಾ ದೇವನೂರು ಮೂರನೇ ಹಂತದ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ ಅಧಿಸೂಚನೆಯನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು. ಡಿನೋಟಿಫೈ ಆದ ನಂತರ ಮಲ್ಲಿಕಾರ್ಜುನ ಸ್ವಾಮಿ ಹೆಸರಿಗೆ 2005ರಲ್ಲಿ ಆ ಜಾಗ ನೋಂದಣಿಯಾಗಿದೆ. ಆ ನಂತರ ಮಲ್ಲಿಕಾರ್ಜುನ ಸ್ವಾಮಿ ತಂಗಿ ಪಾರ್ವತಿಗೆ 2020ರಲ್ಲಿ ಜಾಗವನ್ನು ದಾನವಾಗಿ ನೀಡಿದರು. ಆದರೆ, ನಂತರ ದಿಢೀರಾಗಿ ಮುಡಾ ಆ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣ ಮಾಡಿತು. ಇದರ ಬಗ್ಗೆ ಪಾರ್ವತಿ ಆಕ್ಷೇಪ ವ್ಯಕ್ತಪಡಿಸಿ ಮುಡಾಗೆ ಪತ್ರ ಬರೆದಿದ್ದರು ಎಂದು ಹೇಳಿದರು.
ಪಾರ್ವತಿ ಅವರ ಜಮೀನು 148104 ಚದರ ಅಡಿ ಇದ್ದು, 50:50 ಅನುಪಾತದಡಿ ಅವರಿಗೆ 82 ಸಾವಿರ ಚದರ ಅಡಿ ಜಾಗ ನೀಡಬೇಕಾಗಿತ್ತು. ಆದರೆ, ಅವರಿಗೆ ವಿಜಯನಗರದಲ್ಲಿ 38,284 ಚದರ ಅಡಿ ಜಾಗವನ್ನು ಮಾತ್ರ ನೀಡಲಾಗಿದೆ. ಬದಲಿ ನಿವೇಶ ನೀಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸ್ವತಃ ಸರ್ಕಾರವೇ ಭೂಮಿ ಕಳೆದುಕೊಂಡ ಪಾರ್ವತಿ ಅವರಿಗೆ ಜಾಗ ನೀಡಿದೆ. ಇದರಲ್ಲಿ ಅಕ್ರಮ ನಡೆಯಲು ಹೇಗೆ ಸಾಧ್ಯ. ಎಚ್. ವಿಶ್ವನಾಥ್, ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ಇತರರು ಸುಖಸುಮ್ಮನೆ ಮುಡಾ ಹಗರಣಕ್ಕೆ ಪಾರ್ವತಿ ಹೆಸರು ಎಳೆದು ತರುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.