ವಿಶ್ವಕರ್ಮರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ

17 HANUR 1
ಹನೂರಿನಲ್ಲಿ ತಾಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಕೆ.ಎನ್ ಚೈತ್ರಾ, ಆನಂದಮೂರ್ತಿ, ಮಹೇಶ್, ಮುತ್ತುರಾಜು, ರಂಗಧಾಮಾಚಾರ್ ಇತರರು ಇದ್ದರು.
Published on

ಹನೂರು  ವಿಶ್ವಕರ್ಮ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ವರದಾನವಾಗಬೇಕು ಎಂದು ತಹಸೀಲ್ದಾರ್ ಕೆ.ಎನ್. ಚೈತ್ರಾ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ವಿಶ್ವಕರ್ಮರು ಸಮಾಜದ ಉದ್ಧಾರಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಜನರ ಕಷ್ಟ ಕಾರ್ಪಣ್ಯಗಳಿಗೆ ನೊಂದ ದನಿಯಾಗಿದ್ದರು. ಸಮಾಜದ ಕಲ್ಯಾಣಕ್ಕೆ ಸೇವೆಯನ್ನು ಮುಡಿಪಾಗಿಟ್ಟಿದ್ದರು. ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ದೇವರುಗಳ ದೇವರು, ಬ್ರಹ್ಮಾಂಡದ ಸೃಷ್ಟಿಕರ್ತ ಹಾಗೂ ಕಲೆ, ವಾಸ್ತುಶಿಲ್ಪದ ಪಿತಾಮಹ ಎಂದು ಬಣ್ಣಿಸಲಾಗಿದೆ. ಹಾಗಾಗಿ ಇವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಉತ್ತಮ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಯುವಪೀಳಿಗೆಗೆ ಪರಿಚಯಿಸುವುದರ ಮೂಲಕ ಕೊಂಡೊಯ್ಯುವಂತಹ ಕೆಲಸವಾಗಬೇಕು. ಇದರಿಂದ ಸಮುದಾಯವು ಅಭಿವೃದ್ಧಿ ಹೊಂದುವುದರ ಜತೆಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಜಾಗ ಕೊಡಿ: ಇದಕ್ಕೂ ಮುನ್ನ ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಮುತ್ತುರಾಜು ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರಿದ್ದಾರೆ. ಆದರೆ ಸಮುದಾಯದ ಭವನ ಇಲ್ಲದ ಪರಿಣಾಮ ಜನರು ಸಭೆ, ಸಮಾರಂಭ ಹಾಗೂ ಇನ್ನಿತರೆ ಕಾರ್ಯಕ್ರಮವನ್ನು ನಡೆಸಲು ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ ಮಾಡಿದರು.

ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಶೇಷಣ್ಣ, ಇನ್‌ಸ್ಪೆಕ್ಟರ್ ಸಿ. ಆನಂದಮೂರ್ತಿ, ಸೆಸ್ಕ್ ಎಇಇ ರಂಗಸ್ವಾಮಿ, ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್, ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ತಮ್ಮಯ್ಯಚಾರ್, ಉಪಾಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ಮುತ್ತುರಾಜು, ಮುಖಂಡರಾದ ರಂಗಧಾಮಾಚಾರ್, ನಾಗಚಾರ್, ಕುಮಾರ್, ನವೀನ್, ಪುಟ್ಟರಾಜು, ಶ್ರೀನಿವಾಸ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net