ಯುವ ಜನಾಂಗಕ್ಕೆ ವೀರಣ್ಣಗೌಡ ಆದರ್ಶವಾಗಲಿ

30M.D.R.1
ಮದ್ದೂರಿನ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದಲ್ಲಿ ನಡೆದ ಎಚ್.ಕೆ. ವೀರಣ್ಣಗೌಡರ 125 ವರ್ಷದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಎಚ್.ಕೆ.ವೀರಣ್ಣಗೌಡ ಸಮಾಜಸೇವಾ ಪ್ರಶಸ್ತಿಯನ್ನು ಎಂ.ಆರ್.ಸೀತಾರಾಮ ಅವರಿಗೆ ನೀಡಲಾಯಿತು. ಕೆ.ಟಿ.ಚಂದು, ಕೆ.ಎಂ.ಉದಯ್, ಡಾ.ಮಹೇಶ್ ಜೋಶಿ ಸ್ವರೂಪ್‌ಚಂದ್, ಅಪೂರ್ವಚಂದ್ರು ಇದ್ದರು.
Published on

ಮದ್ದೂರು : ಜೀವನದಲ್ಲಿ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ದುಡಿದರೆ ಖಂಡಿತ ಸಮಾಜದ ಮುಖ್ಯವಾಹಿನಿಗೆ ಬಂದು ಯಶಸ್ಸು ಸಾಧಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಮಾಜಸೇವಕ ಎಂ.ಆರ್.ಸೀತಾರಾಮ ತಿಳಿಸಿದರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಎಚ್.ಕೆ. ವೀರಣ್ಣಗೌಡರ 125ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಎಚ್.ಕೆ.ವೀರಣ್ಣಗೌಡ ಸಮಾಜಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ರಾಜಕಾರಣಿಗಳು ರಾಜಕಾರಣ ಮಾಡುವುದನ್ನು ಬಿಟ್ಟು ಸಮಾಜದ ಏಳಿಗೆಗೆ ದುಡಿದರೆ ಸಮಾಜ ಮುಂದೆ ತರಲು ಸಾಧ್ಯ. ಪ್ರಯತ್ನ ನಮ್ಮದು, ಪ್ರತಿಫಲ ಭಗವಂತನದು. ಯಾರು ಗುರುತಿಸಲಿ ಬಿಡಲಿ ನಮ್ಮ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಿರಬೇಕು. ಈ ನಿಟ್ಟಿನಲ್ಲಿ ಪ್ರತಿಫಲ ಅಪೇಕ್ಷೆ ಇಲ್ಲದೆ ಪ್ರತಿಯೊಬ್ಬರು ದುಡಿಯಬೇಕು ಎಂದು ಕಿವಿ ಮಾತು ಹೇಳಿದರು.

ಎಚ್.ಕೆ. ವೀರಣ್ಣಗೌಡ ಅವರು ಶಿಕ್ಷಕರಾಗಿ, ಪ್ರವರ್ತಕರಾಗಿ, ರೈತ ನಾಯಕರಾಗಿ, ಸ್ವಾತಂತ್ರ್ಯ ಯೋಧರಾಗಿ, ಮೈಸೂರು ಕಾಂಗ್ರೆಸ್‌ನ ಪ್ರವರ್ತಕರಾಗಿ, ಸಾಹಿತಿಗಳಾಗಿ, ಸಂಸದರಾಗಿ ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಇಂದಿನ ಯುವ ಜನಾಂಗ ಇವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಎಚ್. ಕೆ. ವೀರಣ್ಣಗೌಡರ ಹಾದಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು. ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಈ ಸಂಸ್ಥೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮದ್ದೂರು ಕ್ಷೇತ್ರವು ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಲ್ಲಿ ಎಚ್.ಕೆ. ವೀರಣ್ಣಗೌಡರ ಪರಿಶ್ರಮ, ಸಾಧನೆಯೂ ಕೂಡ ಪ್ರಮುಖ ಕಾರಣವಾಗಿದೆ ಎಂದು ಸ್ಮರಿಸಿದರು.

ಎಚ್.ಕೆ.ವೀರಣ್ಣಗೌಡರ ಕುರಿತು ಕೆ.ವಿ. ಶಂಕರಗೌಡ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ. ಶಂಕರೇಗೌಡ ಮಾತನಾಡಿ, ಎಚ್.ಕೆ. ವೀರಣ್ಣಗೌಡ ನಾಡು ಕಂಡ ಅಪ್ರತಿಮ ಹೋರಾಟಗಾರ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಮತ್ತೊಬ್ಬರಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟಂತಹ ಸಹೃದಯಿ. ಹುಟ್ಟಿನಿಂದಲೂ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಂಡಿದ್ದ ಇವರು, ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕ್ಷೇತ್ರದ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಚ್.ಕೆ.ವೀರಣ್ಣಗೌಡರು ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಇರ್ವಿನ್ ನಾಲಾ ಚಳವಳಿಯ ಮುಂದಾಳತ್ವವನ್ನು ವಹಿಸಿ, ರೈತರ ಪರವಾಗಿ ಹೋರಾಟ ಮಾಡಿ, ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು. ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಎಚ್.ಕೆ. ವೀರಣ್ಣಗೌಡರ ಸಾಧನೆಯನ್ನು ಮೆಲುಕು ಹಾಕಬೇಕಾದರೆ ಅವರ ಜೀವನ ಸಾಧನೆಯನ್ನು ಒಮ್ಮೆ ಓದಿ ತಿಳಿಯಬೇಕು ಹಾಗೂ ವಿದ್ಯಾರ್ಥಿಗಳು ಎಚ್.ಕೆ. ವೀರಣ್ಣಗೌಡರ ಜೀವನ ಸಾಧನೆ ಕುರಿತಾದ ಪುಸ್ತಕವನ್ನು ಅಭ್ಯಾಸ ಮಾಡುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಮಾಜಸೇವಕ ಎಂ.ಆರ್.ಸೀತಾರಾಮ ಅವರಿಗೆ ಎಚ್.ಕೆ.ವೀರಣ್ಣಗೌಡ ಸೇವಾ ಪ್ರಶಸ್ತಿಯನ್ನು ಹಿರಿಯ ಗಾಂಧಿವಾದಿ ಕೆ.ಟಿ.ಚಂದು ನೀಡಿ ಗೌರವಿಸಿದರು. ಅಲ್ಲದೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದರ್ಶ್ ಮರಿಯಪ್ಪ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಅಧ್ಯಕ್ಷ ಸ್ವರೂಪ್‌ಚಂದ್, ಕಾರ್ಯದರ್ಶಿ ಅಪೂರ್ವ ಚಂದ್ರ, ಖಜಾಂಜಿ ಜಿ.ಎಸ್. ಶಿವರಾಮು, ಪ್ರಾಂಶುಪಾಲ ಶಂಕರಗೌಡ, ಆಡಳಿತ ಮಂಡಳಿಯ ಸದಸ್ಯರು, ಬೋಧಕ ಬೋಧಕೇತರ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net