

ಮದ್ದೂರು: ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಇದರೊಂದಿಗೆ ಸಂಸ್ಕೃತಿ, ಆಚಾರ ಹಾಗೂ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ವೈದ್ಯನಾಥಪುರದ ಶ್ರೀ ಶಾಂತೇಶ್ವರಸ್ವಾಮಿ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಶಾಂತೇಶ್ವರಸ್ವಾಮಿ ಕದಂಬ ಜಂಗಮ ಮಠದಲ್ಲಿ ಆಯೋಜಿಸಿದ್ದ ವಿಶೇಷ ಪೌರ್ಣಿಮೆ ಪೂಜೆ, ರೇಣುಕಾಚಾರ್ಯರ ಜಯಂತಿ ಮಹೋತ್ಸವ, ಬೆಳದಿಂಗಳ ಪೂಜೆ ಮತ್ತು ಧಾರ್ಮಿಕ ಚಿಂತನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗುತ್ತದೆ. ಧರ್ಮದ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರೂ ಬದುಕಬೇಕು. ಹುಟ್ಟು ಉಚಿತ, ಸಾವು ಖಚಿತ. ಈ ನಡುವಿನ ಬದುಕಿನಲ್ಲಿ ಸಮಾಜಕ್ಕೆ ಆದರ್ಶವಾಗಬೇಕು. ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗಭೂಷಣ್, ಆರ್ಯುವೇದಿಕ್ ಅಸ್ಪತ್ರೆಯ ಆಡಳಿತಾಧಿಕಾರಿ ಕವಿತಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಚಕ್ರಪಾಣಿ, ಪ್ರಧಾನ ಕಾರ್ಯದರ್ಶಿ ಎಂ.ಪಿ.ವೆಂಕಟೇಶ್ ಹಾಗೂ ಹಿರಿಯ ಮುಖಂಡ ಬಸವರಾಜಪ್ಪ ಅವರನ್ನು ಅಭಿನಂದಿಸಲಾಯಿತು.
ವಿಶೇಷ ಪೌರ್ಣಿಮೆ ಪೂಜೆ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರುವುದರ ಜತೆಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಜಿ.ಗೌರಿಶಂಕರ, ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಸ್ವಾಮಿ, ಮದ್ದೂರು ವೀರಶೈವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್ ಇದ್ದರು.