

ವಿಜಯಪುರ: ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು, ತತ್ವಾದರ್ಶಗಳನ್ನ ನೀಡಿದ ಸಂತ ಶ್ರೇಷ್ಠ ಕನಕದಾಸರ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ, ಸತ್ಪುರುಷರು ಈ ಮನುಕುಲದ ಉದ್ದಾರಕರು ಹಾಗೂ ಸುಧಾರಕರು. ಕತ್ತಲೆಯನ್ನು ಕಳೆದು ಅಂತರಂಗದ ತಿಳುವಿನ ಒಳಗಣ್ಣನ್ನು ತೆರೆಸಿದ ಶ್ರೇಷ್ಠ ಸತ್ಪುರುಷರು. ವಿವಿಧ ಸಂತರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ವಿವಿಧ ಸಂತರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮಾಜಮುಖಿ ಚಿಂತನೆಗಳನ್ನು ನೀಡಿದ ಕನಕದಾಸ, ಬುದ್ಧ, ಬಸವ ಅಂಬೇಡ್ಕರ್ ಅವರ ಆದರ್ಶಮಯ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕನಕದಾಸರು ಸಕಲರಿಗೆ ಸಮಾನತೆ ಬೋಧಿಸಿದರು. ಸಕಲರನ್ನು ಸದ್ಭಾವನೆಯಿಂದ ಕಾಣುವಂತಹ ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ನಮ್ಮ ಸಾರ್ಥಕ ಜೀವನಕ್ಕೆ ಕನಕದಾಸರ ಚಿಂತನೆಯ ಬಲ ಅಳವಡಿಸಿಕೊಳ್ಳಬೇಕು. ಸರ್ವರೂ ಅತ್ಯಂತ ಮೌಲ್ಯಯುತ ಜೀವನ ನಡೆಸಲು ಈ ಸಂತರು ಸಾರಿದ ತತ್ವಗಳು ಎಂದೆಂದಿಗೂ ದಾರಿ ದೀಪವಾಗಿವೆ ಎಂದ ಬಬಲೇಶ್ವರ ಅವರು, ಕನಕದಾಸರ ತತ್ವ ಚಿಂತನೆಗಳನ್ನು ಮಕ್ಕಳ ಮನೋಭೂಮಿಕೆಯಲ್ಲಿ ಮೂಡಿಸಲು ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಹಂತದಲ್ಲಿ ಕನಕದಾಸರ ವಿಚಾರಧಾರೆಗಳನ್ನು ತಲುಪಿಸುವ ಅವರ ಬಗೆಗೆ ಅನೇಕ ಸ್ಪರ್ಧೆಗಳನ್ನು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸುವ ಮೂಲಕ ಬಾಲ ವಿಕಾಸ ಅಕಾಡೆಮಿ ಮುಂಬರುವ ದಿನಗಳಲ್ಲಿ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಲಾಗುವುದು ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಕನಕದಾಸರು ಸಮಾಜದ ಒಳಿತಿಗಾಗಿ ನೀಡಿರುವ ಸಂದೇಶ ಪಾಲಿಸೋಣ, ಇವರು ಓರ್ವ ಹರಿದಾಸ ಸಂತರು, ತತ್ವಜ್ಞಾನಿ, ವ್ಯಾಸ ತೀರ್ಥರ ಶಿಷ್ಯರಾಗಿದ್ದರು. 16ನೇ ಶತಮಾನದಲ್ಲಿ ಭಕ್ತಿ ಪಂಥದಲ್ಲಿನ ದಾಸವರೇಣ್ಯರು ಸಮಾಜದ ಸಮಾನತೆಗಾಗಿ ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯ ರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜದ ಸುಧಾರಕರಾಗಿದ್ದಾರೆ ಎಂದು ಹೇಳಿದರು.
ಕನಕದಾಸರು ಸುಮಾರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧಾನ್ಯಚರಿತೆ, ನಳಚರಿತೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಈ ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು, ಭೇದಭಾವ ಇರಬಾರದು. ಎಲ್ಲರೂ ಸಮಾನರು ಎಂಬ ಸಂದೇಶ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿದ್ದಾರೆ ಎಂದರು.
ಪ್ರೊ.ಎ.ಎಚ್. ಕೊಳಮಲಿ ಉಪನ್ಯಾಸ ನೀಡುತ್ತಾ, ಕನಕದಾಸರು ಮಹಾನ್ ತ್ಯಾಗಿಯಾಗಿದ್ದರು. ದಾಸ ಸಾಹಿತ್ಯದ ಆಶ್ವಿನಿ ದೇವತೆಯಾಗಿದ್ದರು. ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ಮುಖಂಡರಾದ ಮಲ್ಲಣ್ಣ ಶಿರಸ್ಯಾಡ ಮಾತನಾಡಿದರು. ಸಿದ್ದರಾಮ ಬಿರಾದಾರ, ರಾಮಸ್ವಾಮಿ ಕೊಳಮಲಿ, ಎಸ್.ಸಿ. ಕುರ್ಲೆ ಅವರು ಕಾವ್ಯ ವಾಚನ ಮಾಡಿದರು. ಮಹೇಶ ಪೂಜಾರಿ ನೇತೃತ್ವದ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು.
ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ, ರಾಹುಲ್ ಜಾಧವ, ಎಎಸ್‌ಪಿ ಶಂಕರ ಮಾರಿಹಾಳ, ಎಡಿಸಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ರವಿ ಕಿತ್ತೂರ, ಸುಜಾತ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ದೇವೇಂದ್ರ ಮಿರೇಕರ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಂತ ಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಜಿಪಂ ಸಿಇಒ ರಿಷಿ ಆನಂದ ಚಾಲನೆ ನೀಡಿದರು. ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮೆರವಣಿಗೆ ರಂಗಮಂದಿರ ತಲುಪಿ ಸಂಪನ್ನಗೊಂಡಿತು.