ಬಲಿಷ್ಠ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಿ

30 gkp 01
ಗೋಣಿಕೊಪ್ಪಲುವಿನಲ್ಲಿ ಆಯೋಜಿಸಿದ್ದ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಪಿಡಿಜಿ ಲಯನ್ ಕಿಶೋರ್ ರಾವ್, ನೂತನ ಅಧ್ಯಕ್ಷ ಚೆಪ್ಪುಡೀರ ಪಿ.ಬೋಪಣ್ಣ, ಕಾರ್ಯದರ್ಶಿ ಮನ್ನಕ್ಕಮನೆ ಸೌಮ್ಯಾಬಾಲು, ಖಜಾಂಚಿ ಐನಂಡ ಎಂ. ಸೋಮಣ್ಣ ಇದ್ದರು.
Published on

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಚೆಪ್ಪುಡೀರ ಪಿ.ಬೋಪಣ್ಣ, ಕಾರ್ಯದರ್ಶಿಯಾಗಿ ಮನ್ನಕ್ಕಮನೆ ಸೌಮ್ಯಾಬಾಲು ಹಾಗೂ ಖಜಾಂಚಿಯಾಗಿ ಐನಂಡ ಎಂ. ಸೋಮಣ್ಣ ನೇಮಕವಾಗಿದ್ದು, ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಪಿಡಿಜಿ ಲಯನ್ ಕಿಶೋರ್ ರಾವ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಗೋಣಿಕೊಪ್ಪಲುವಿನ ಅಂತೂರ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಸಿ.ಟಿ.ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರವನ್ನು ಸ್ವೀಕರಿಸಿದರು. ಸರ್ವ ಸದಸ್ಯರ ಸಹಕಾರದಿಂದ ಮತ್ತು ಒಗ್ಗಟ್ಟಿನಿಂದ ಹಲವು ಗುರಿಗಳನ್ನು ಸಾಧಿಸೋಣ. ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದು ನೂತನ ಅಧ್ಯಕ್ಷ ಚೆಪ್ಪುಡಿರ ಪಿ.ಬೋಪಣ್ಣ ಹೇಳಿದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಪಿಡಿಜಿ ಲಯನ್ಸ್ ಮಾಜಿ ಪ್ರಾಂತಪಾಲ ಕಿಶೋರ್ ರಾವ್ ಮಾತನಾಡಿ, ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳು ಸಮಾಜಕ್ಕೆ ಬೆಳಕು ನೀಡಲಿದೆ. ಎಲ್ಲ ಸದಸ್ಯರು ಒಂದು ಕುಟುಂಬದಂತೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಣ್ಣಿನ ಉಚಿತ ತಪಾಸಣೆ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸಹಾಯ, ಪರಿಸರ ಸಂರಕ್ಷಣೆ ಹಾಗೂ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಆಶಿಸುತ್ತೇನೆ ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಸಿ.ಟಿ.ಅಪ್ಪಣ್ಣ ಮಾತನಾಡಿ, ಲಯನ್ಸ್ ಕ್ಲಬ್‌ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಸರ್ವ ಸದಸ್ಯರು ಪಾಲ್ಗೊಳ್ಳುವ ಮೂಲಕ ನಿಗದಿತ ಗುರಿಯನ್ನು ಸಾಧಿಸಿದ್ದೇವೆ. ಮುಂದಿನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಸಂಸ್ಥೆ ಪ್ರಾಂತ್ಯ ಅಧ್ಯಕ್ಷ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷರಾದ ಮಹದೇವಪ್ಪ, ಬೊಳ್ಳಮ್ಮ, ಸುಮನ್, ಬಾಲಚಂದ್ರ, ನಿಕಟಪೂರ್ವ ಕಾರ್ಯದರ್ಶಿ ಶ್ರೀಮಂತ್, ಖಜಾಂಚಿ ಸಚಿನ್ ಬೆಳ್ಯಪ್ಪ, ಹಿರಿಯರಾದ ಸಿ.ಎ.ಮುತ್ತಣ್ಣ, ಜಮ್ಮಡ ಮೋಹನ್, ಪಟ್ಟಡ ಧನು ಉತ್ತಯ್ಯ, ಡಾ.ಚಿಣ್ಣಪ್ಪ ಇತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net