

ಬೈಲಹೊಂಗಲ: ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು, ಇದನ್ನು ಖಾತ್ರಿಪಡಿಸುವ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಕನ್ನಡ ನಂ.4 ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ತಹಸೀಲ್ದಾರ್ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಹಾಗೂ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಹಕ್ಕು ಮತ್ತು ಕಾಯ್ದೆ ಬಗ್ಗೆ ಅರಿವು ಹೊಂದಬೇಕು. ಕೈಗಾರಿಕೆ, ಹೋಟೆಲ್ ಹಾಗೂ ಕಾರ್ಖಾನೆ ಸೇರಿ ವಿವಿಧೆಡೆ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಅಂತಹ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಬೇಕು ಎಂದರು.
ಕಾರ್ಮಿಕ ನಿರೀಕ್ಷಕಿ ದೀಪಾ ಬಂಡಿ ಉಪನ್ಯಾಸ ನೀಡಿದರು.
ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ, ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮನ್ವಯ ಅಧಿಕಾರಿ ಬಿ.ಎನ್.ಕಸಾಳೆ, ಸಿಡಿಪಿಒ ಅರುಣಕುಮಾರ ಎಸ್.ಬಿ., ಸರ್ಕಾರಿ ಅಪರ ವಕೀಲ ರಮೇಶ ಕೋಲಕಾರ, ಮುಖ್ಯಶಿಕ್ಷಕ ಡಿ.ಎನ್.ಹಲಕಿ, ಎಸ್‌ಡಿಎಂಸಿ ಸದಸ್ಯ ಮಹಾಂತೇಶ ರಾಜಗೋಳಿ, ಶಿಕ್ಷಕ ಸಿ.ಎಸ್. ಧರೆಪ್ಪನವರ, ಭೀಮರಾವ್ ಮರಗಲ್, ಮಂಜುನಾಥ ಕರಿಮುದಕ್ಕವರ ಇತರರಿದ್ದರು. ಶಿಲ್ಪಾ ಗಂಗೋಳ ನಿರೂಪಿಸಿದರು.