

ಚಿಕ್ಕೋಡಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗುರಿ ಶಿಕ್ಷಕರದ್ದಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಕುಲಕರ್ಣಿ ಹೇಳಿದರು.
ಇಲ್ಲಿನ ಸಿಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬಿ.ಸಿ.ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳನ್ನು ಬಹುಮುಖ ಪ್ರತಿಭೆಗಳನ್ನಾಗಿ ರೂಪಿಸುವತ್ತ ಗಮನ ಹರಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜೋಡಕುರಳಿ ಸಿದ್ಧಾರೂಢ ಮಠದ ಚಿದ್ಘನಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಭರತ ನಾಡಿನಲ್ಲಿ ಗುರುಗಳಿಗೆ ಅತ್ಯಂತ ಶ್ರೇಷ್ಠವಾದ ಮಾನ್ಯತೆ ಇದೆ ಎಂದರು.
ಬಿ.ಸಿ.ಗಂಗಾಲ್ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಬೀರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿದ್ದಪ್ಪ ಕದ್ದಿ ಮಾತನಾಡಿ, ಅಂಗವೈಕಲ್ಯ ಮರೆತು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ೪೨ ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ ಸೇವೆ ಇದೀಗ ೫೨೪ ವಿದ್ಯಾರ್ಥಿಗಳು ಹಾಗೂ ೧೫ ಜನ ಶಿಕ್ಷಕ ವರ್ಗಕ್ಕೆ ಬಂದು ತಲುಪಿದೆ. ಸಿಎಲ್‌ಇ ಸಂಸ್ಥೆ ನನ್ನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆ ತಂದಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗ್ರಂಥಾರ್ಪಣೆ ಮಾಡಲಾಯಿತು.
ಹಳೇ ವಿದ್ಯಾರ್ಥಿ ಬಳಗದ ಅಧ್ಯಕ್ಷ ಮಹೇಶ ಭಾತೆ, ಕಾರ್ಯದರ್ಶಿ ಡಾ.ದರ್ಶನ ಪೂಜಾರಿ, ಎನ್.ಎಸ್.ವಂಟಮುತ್ತೆ, ಮುರುಗೇಶ ಗಂಗಾಲ, ಮಲ್ಲಿಕಾರ್ಜುನ ಕವಟಗಿಮಠ, ಚಂದ್ರಶೇಖರ ಅರಬಾವಿ, ಸಾಗರ ಬಿಸ್ಕೋಪ್, ಡಾ.ಸುರೇಶ ಉಕ್ಕಲಿ, ಬಿ.ಡಿ.ರುಖಡೆ, ಆರ್.ಎಂ.ಬುಬನಾಳೆ ಇತರರಿದ್ದರು.