

ಅಥಣಿ: ಕಾರ್ಗಿಲ್ ವಿಜಯ ದಿವಸ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ ಸಮಸ್ತ ಭಾರತೀಯರು ಹೆಮ್ಮೆ ಪಡುವ ದಿನ. ಇದು ಪ್ರತಿಯೊಬ್ಬ ಭಾರತೀಯರ ದೇಶಾಭಿಮಾನ, ಶೌರ್ಯ ಮತ್ತು ಪರಾಕ್ರಮದ ಸಂಕೇತವಾಗಿದೆ ಎಂದು ಮಾಜಿ ಯೋಧ ಗಂಗಪ್ಪ ಗಂಗಾಧರ ಹೇಳಿದರು.
ಪಟ್ಟಣದ ಮಿಲಟರಿ ಕ್ಯಾಂಟೀನ್ ಆವರಣದಲ್ಲಿ ಅಥಣಿ ತಾಲೂಕು ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 26ನೇ ಕಾರ್ಗಿಲ್ ವಿಜಯ ದಿವಸ್ ಮತ್ತು ಅಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯುದ್ದದಲ್ಲಿ ಹುತ್ಮಾತರಾದ ಸೈನಿಕರನ್ನು ಸ್ಮರಿಸಲು ಪ್ರತಿವರ್ಷ ಜು.26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಕಾರ್ಗಿಲ್ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸೋಣ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಣಗೌಡ ಪಾಟೀಲ ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ಮಡಿದ 527 ಸೈನಿಕರ ಪೈಕಿ ನಾಲ್ವರು ಅಥಣಿ ತಾಲೂಕಿನ ಯೋಧರಿದ್ದಾರೆ. ನಿವೃತ್ತಿ ಹೊಂದಿದ ಯೋಧರು ಮಾಜಿ ಸೈನಿಕರ ಸಂಘದ ಸದಸ್ಯತ್ವ ಪಡೆದುಕೊಂಡು ಕೇಂದ್ರ ಸರ್ಕಾರದಿಂದ ದೊರಕುವ ಪಿಂಚಣಿ ಯೋಜನೆ, ಶಾಲಾ ಮಕ್ಕಳ ಶಿಷ್ಯವೇತನ, ಕ್ಯಾಂಟೀನ್ ಸೌಲಭ್ಯ, ಆರೋಗ್ಯ ಕಾರ್ಡ್ ಸೇರಿ ಇತರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಕಾರ್ಗಿಲ್ ಯುದ್ದದಲ್ಲಿ ಮಡಿದ ವೀರ ಯೋಧರ ಸ್ಮರಿಸಿ ಶೋಕಾಚರಣೆ ಮಾಡಲಾಯಿತು. ಹುತಾತ್ಮ ಯೋಧರ ಸಂಬಂಧಿಗಳಾದ ಮಹೇಶ್ವರಿ ಕುಳೆ, ರತ್ನವ್ವ ಕಾಂಬಳೆ, ಮಹಾದೇವಿ ಚೌಗಲೆ ಅವರನ್ನು ಸನ್ಮಾನಿಸಲಾಯಿತು. ಲವ ಕಾಂಬಳೆ, ಮಾಜಿ ಸೈನಿಕ ಶ್ರೀಮಂತ ಜಗತಾಪ, ರಾಮ ಮಾಳಿ, ಸತ್ಯಪ್ಪ ಮೆಂಡಿಗೇರಿ, ಅಶೋಕ ಬೆಟಗೇರಿ, ನಿಂಗಪ್ಪ ದೊಡ್ಡಣ್ಣವರ, ರಾಜಶೇಖರ್ ಕಾಶಿದ್, ಅಪ್ಪಾಸಾಹೇಬ ಸಾಳುಂಕೆ, ಸಹಬುದ್ದೀನ್ ಹವಾಲ್ದಾರ್, ಗುರಪ್ಪ ಮಗದುಮ್ಮ, ಸಿದ್ದರಾಜ ಬೊರಾಡೆ,ಪ್ರಕಾಶ ಕದಂ, ಕೈಲಾಸ ಮದಬಾವಿ, ಸ್ನೇಹಾ ಪಾಟೀಲ, ಮಲ್ಲಿನಾಥ ಚೌಗಲಾ ಇತರರು ಇದ್ದರು.