

ಹುಬ್ಬಳ್ಳಿ: ಯಾಜ್ಞವಲ್ಕ್ಯ ಮುನೀಂದ್ರರು ಯೋಗಶಾಸ್ತ್ರದಲ್ಲಿ ನಿಷ್ಣಾತರು. ಯೋಗಸಿದ್ಧಿ ಜತೆಗೆ ಪರಮಾತ್ಮನ ಸಾಕ್ಷಾತ್ಕಾರವನ್ನೂ ಪಡೆದಿದ್ದರು.
ಹಾಗಾಗಿಯೇ ಇವರಿಗೆ ಯೋಗೀಶ್ವರ ಎಂಬ ಹೆಸರು ಬಂತು. ನಮ್ಮ ಭರತ ಖಂಡ ಜಾಗೃತವಾಗಿ ನಿಂತಿರುವುದೇ ಇಂಥ ಯೋಗಿ-ಸಂತರುಗಳಿಂದ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ಇಲ್ಲಿಯ ಗೋಕುಲ ಗಾರ್ಡನ್‌ನಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ಎರಡು ದಿನಗಳ ಕಾಲ ಜರುಗಲಿರುವ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸನಾತನ ಧರ್ಮಕ್ಕೂ ಇತಿಹಾಸವಿದೆ. ಗ್ರಂಥ ರೂಪದಲ್ಲಿ ಋಷಿ-ಮುನಿಗಳು ನಮ್ಮ ಸನಾತನ ಧರ್ಮ ಸಂಸ್ಕಾರವನ್ನು ನಮಗೆ ಧಾರೆ ಎರೆದಿದ್ದಾರೆ. ಇಡೀ ವಿಶ್ವವೇ ನಮ್ಮ ಸನಾತನವನ್ನು ಮೆಚ್ಚುತ್ತಿದೆ. ಇಂಧ ಧರ್ಮವನ್ನು ನಾವೆಲ್ಲರೂ ಉಳಿಸಿ, ಬೆಳೆಸೋಣ ಎಂದರು.
ಕಣ್ವಮಠದ ಪೀಠಾಧ್ಯಕ್ಷ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಗೋವಿಂದ ಜೋಶಿ, ಶ್ರೀಕಾಂತ ಕರಿ, ಸತ್ಯನಾರಾಯಣ ಮುಜಮದಾರ, ಮನೋಹರ ಮಾಡಗೇರ, ಗುರುಚಿದಂಬರ ದೀಕ್ಷಿತ, ವಿಶ್ವನಾಥ ಸ್ವಾಮೀಜಿ, ಶಂಕರಭಟ್ ಜೋಶಿ, ವೇಣುಗೋಪಾಲ ಕೃಷ್ಣ, ಸತ್ಯನಾರಾಯಣ ಮರಟಗೇರಿ ಇತರರು ಉಪಸ್ಥಿತರಿದ್ದರು.