

ಹೊನ್ನಾವರ: ಮನುಷ್ಯ ಜಡತ್ವವನ್ನು ಬಿಟ್ಟು ಜ್ಞಾನ ಯೋಗದೆಡೆಗೆ ಸಾಗಬೇಕು. ಮನೋವಿಕಾಸಕ್ಕೆ ಧಾರ್ಮಿಕ ಸಂಸ್ಥೆಗಳು ಬೇಕು ಎಂದು ಬೆಂಗಳೂರಿನ ಶ್ರೀ ಯೋಗೀಶ್ವರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಸಂಸ್ಕೃತಿ ಕುಂಭ ಮಲೆನಾಡು ಉತ್ಸವ ಹಾಗೂ ಪ್ರತಿಷ್ಠಾ, ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಇಂದು ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯ ಉಳಿದಿರಲು ರಮಣ ಮಹರ್ಷಿಗಳು, ರಾಮಕೃಷ್ಣ, ವಿವೇಕಾನಂದರಂಥವರ ತ್ಯಾಗದ ಫಲ ಕಾರಣವಾಗಿದೆ. ಕ್ಷೇತ್ರದ ಮಾರುತಿ ಗುರೂಜಿ ಅವರಲ್ಲಿರುವ ಸಾಮಾಜಿಕ ಕಾಳಜಿ, ಬದ್ಧತೆ, ಸೇವಾ ಗುಣ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮಾತನಾಡಿ, ನೂರಾರು ವರ್ಷ ಜಲಾಧಿವಾಸದಲ್ಲಿದ್ದ ದೇವರ ವಿಗ್ರಹ ಈ ಕ್ಷೇತ್ರಕ್ಕೆ ಬಂದ ನಂತರ ಕ್ಷೇತ್ರವು ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಇಂದು ಕಲಾಸಂಕೋಚ ಮಾಡಿರುವ ಆ ವಿಗ್ರಹಕ್ಕೆ ಪುನಃ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಸಂತಸದ ಸಂಗತಿಯಾಗಿದೆ. ನಾವು ಪರಿವರ್ತನೆಗೊಂಡರೆ ನಮ್ಮ ಮಕ್ಕಳು ಪರಿವರ್ತನೆಯಾಗುತ್ತಾರೆ. ಸಮಾಜ ಸುಸಂಸ್ಕೃತವಾವಾಗುತ್ತದೆ ಎಂದರು.
ಗೋವಾ ಮಾಜಿ ಸಚಿವ ದಯಾನಂದ ಮಾಂಜ್ರೇಕರ್ ಮಾತನಾಡಿ, ಶ್ರೀ ಕ್ಷೇತ್ರದ ಮೂಲಕ ಕೇವಲ ಧಾರ್ಮಿಕ ಕಾರ್ಯ ಅಷ್ಟೆ ಅಲ್ಲದೆ ಸೇವಾ ಕಾರ್ಯದ ಮೂಲಕ ಸಮಾಜ ಸೇವೆಗೆ ತೊಡಗಿಸಿಕೊಂಡಿದೆ. ಸರ್ಕಾರದ ಯಾವುದೇ ಅನುದಾನ ಪಡೆಯದೆ ಒಂದು ಉತ್ತಮ ಶೈಕ್ಷಣಿಕ ಸಂಸ್ಥೆ ಕಟ್ಟಿದೆ ಎಂದರು.
ಮಾಜಿ ಸಚಿವ ಎಸ್. ಶಿವಣ್ಣ, ಡಿ.ಆರ್. ಶಿವಪ್ರಕಾಶ, ಉದ್ಯಮಿ ಜೆ.ಪಿ. ಶಿವಣ್ಣ, ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕ, ಉದ್ಯಮಿ ಹರಿಕೃಷ್ಣ ಭಟ್ ಇದ್ದರು.
ಭರತ್, ಹರಿಪ್ರೀತ ಪ್ರಾರ್ಥಿಸಿದರು. ಸುಬ್ರಾಯ ಭಟ್, ಹರ್ಷಾ ಭಟ್ ವೇದಘೋಷ ಪಠಿಸಿದರು. ಉತ್ಸವ ಸಮಿತಿ ಕಾರ್ಯದರ್ಶಿ ಅಜಿತ್ ಸ್ವಾಗತಿಸಿದರು. ಮಂಜುನಾಥ ಗೌಡ ವಂದಿಸಿದರು.