

ತೆಲಸಂಗ: ಆರ್‌ಎಸ್‌ಎಸ್ ಭಾರತದ ಶಕ್ತಿಯಾಗಿದೆ. ದೇಶಕ್ಕೆ ಸಂಕಷ್ಟ ಎದುರಾದಾಗ ದೇಶ ಸೇವೆಗಾಗಿ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧಾವಿಸುತ್ತದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ನೂರು ವರ್ಷದ ಸಂಭ್ರಮಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ವಿಕೋಪ ಹಾಗೂ ಸಾಮಾಜಿಕ ನೆರವಿನ ಅಗತ್ಯವಿರುವ ಕಡೆಗೆ ಆರ್‌ಎಸ್‌ಎಸ್ ಸ್ವಯಂ ಸೇವಕರು ತಕ್ಷಣ ಕಾರ್ಯೋನ್ಮುಖರಾಗುತ್ತಾರೆ. ಯುವ ಜನತೆಯಲ್ಲಿ ಆಳವಾದ ದೇಶಾಭಿಮಾನ ಭಿತ್ತುವ ಮೂಲಕ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಆರ್‌ಎಸ್‌ಎಸ್ ಮುಖ್ಯ ವಕ್ತಾರ ಡಾ.ಈರಪ್ಪ ಬಿರಾದರ ಮಾತನಾಡಿ, ಆರ್‌ಎಸ್‌ಎಸ್ ವ್ಯಕ್ತಿಯ ಆಂತರಿಕ ಶಕ್ತಿ ಮತ್ತು ಶಿಸ್ತಿನ ಮೇಲೆ ಕೇಂದ್ರೀಕರಿಸಿ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯ ಮಾಡುತ್ತಿದೆ. ಲಕ್ಷಾಂತರ ಸ್ವಯಂಸೇವಕರ ಮೂಲಕ ದೇಶಭಕ್ತಿ, ರಾಷ್ಟ್ರೀಯತೆ ಮತ್ತು ಸೇವಾ ಮನೋಭಾವವನ್ನು ಸಮಾಜದ ಎಲ್ಲ ಸ್ತರಗಳಲ್ಲಿ ಬಿತ್ತುತ್ತಾ ಬಂದಿದೆ. ಸಂಘವು ವ್ಯಕ್ತಿಗಳಿಗೆ ತಮ್ಮ ಕರ್ತವ್ಯಗಳ ಅರಿವು ಮೂಡಿಸಿ, ಸಮಾಜ ಮತ್ತು ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದೆ ಎಂದರು.
ಸ್ವಯಂ ಸೇವಕರಾದ ಸಂತೋಷ ಕುಲಕರ್ಣಿ, ಕೇಶವ ಉಂಡೋಡಿ, ಜಗದೀಶ ಮುಧೋಳ, ಜಗದೀಶ ಮಠದ, ಮಹೇಶ ಜಾಡರ, ಮಹಾದೇವ ದಶವಂತ, ಸಾಹೇಬಗೌಡ ಪಾಟೀಲ, ಶರಣಪ್ಪ ಅವಟಿ, ರಾಜಕುಮಾರ ಹೊನಕಾಂಬಳೆ, ವಿನೋದ ಪಾಟೀಲ, ಸಂಜೀವ ನಿರ್ವಾಣಿ, ಸಿದ್ದು ರೋಡಗಿ ಇತರರು ಇದ್ದರು.