ಹೆಣ್ಣು ಭ್ರೂಣ ಹತ್ಯೆ ಪಾಪ ಎಂಬ ಅರಿವು ಮೂಡಿಸಲಿ

1 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯದ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಕೆಲವರು ಮಾಡುತ್ತಿದ್ದಾರೆ. 80ರ ದಶಕದಲ್ಲಿ ಏಡ್ಸ್ ಬಗ್ಗೆ ಇದ್ದ ಕೀಳರಿಮೆ, ತಿರಸ್ಕಾರ ಮನೋಭಾವ, ಭಯ, ಆತಂಕ ಇಂದು ಆರೋಗ್ಯ ಇಲಾಖೆ ಜನಜಾಗೃತಿಯಿಂದ ದೂರಾಗಿದೆ. ಅದರಂತೆ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಇತರ ಇಲಾಖೆಗಳು ಕೈಜೋಡಿಸಿ, ಸಾರ್ವಜನಿಕರಲ್ಲಿ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರುಶರಾಮ ದೊಡಮನಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಆಸ್ಪತ್ರೆಗಳು, ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಬೃಹತ್ ಜನಜಾಗೃತಿ ಜಾಥಾ ಹಾಗೂ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಬಗ್ಗೆ ಸಮಾಜದಲ್ಲಿದ್ದ ಭಯ, ಆತಂಕ ಮತ್ತು ತಿರಸ್ಕಾರ ಮನೋಭಾವ ದೂರಾಗಿದೆ. ಇದಕ್ಕೆ ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು ಮತ್ತು ಆರೋಗ್ಯ ಇಲಾಖೆ ಇದನ್ನು ಆಂದೋಲನ ರೀತಿ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದು ಕಾರಣ. ಹೆಣ್ಣು ಗಂಡು ಸಮ. ಮಕ್ಕಳಲ್ಲಿ ಬೇದಭಾವ ಬೇಡ. ಕೆಲವರು ಕಾನೂನು ಬಾಹೀರವಾಗಿ ಪರೀಕ್ಷಿಸಿಕೊಂಡು ಹೆಣ್ಣು ಭ್ರೂಣಗಳ ಹತ್ಯೆ ಮಾಡುತ್ತಿರುವ ವರದಿಗಳು ಬರುತ್ತಿವೆ. ಇದಕ್ಕೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೈ ಜೋಡಿಸುವುದು ಸರಿಯಲ್ಲ. ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆ ಜತೆಗೆ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಣೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಪ್ರಸಕ್ತ ಸಾಲಿನಲ್ಲಿ 32,193 ಗರ್ಭಿಣಿಯರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 9 ಜನರಲ್ಲಿ ರೋಗ ಕಂಡು ಬಂದಿದೆ. ಹೆಚ್ಚು ಅರಿವಿಗೆ ಜಾಗೃತಿ ಕಾರ್ಯಕ್ರಮ ಹೆಚ್ಚಿಸಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ತನುಜಾ ಎಚ್.ಎನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಡಾ. ಸತೀಶ ಇರಕಲ್ಲ, ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ, ಅಧಿಕಾರಿಗಳು, ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಇತರರು ಇದ್ದರು. ಜಾಥಾದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಮೂಕಾಭಿನಯ, ಏಕಾಂಕ ನಾಟಕ ಮತ್ತು ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅಯ್ಯನಗೌಡ ಪಾಟೀಲ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net