

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕಾನೂನಿಗೆ ಗೌರವ ಕೊಡಬೇಕು. ಈಗ ಸಿಎಂ ಸಿದ್ದರಾಮಯ್ಯ ಕೂಡಾ ಕಾನೂನಿಗೆ ಗೌರವ ನೀಡುತ್ತಾರೆ. ತನಿಖೆಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಗುತ್ತಿಗೆದಾರನೊಬ್ಬನ ಆತ್ಮಹತ್ಯೆಗೆ ನಾನು ಕಾರಣ ಎಂಬ ಆರೋಪ ಎದುರಾಯಿತು. ಆಗ ನಾನು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಿದ್ದೆ. ಈಗ ಸಿದ್ದರಾಮಯ್ಯ ಕೂಡಾ ಇದೇ ಮಾದರಿ ಅನುಸರಿಸುತ್ತಾರೆಂಬ ನಂಬಿಕೆಯಿದೆ ಎಂದರು.
ಮುಡಾ ಹಗರಣದ ಕಾನೂನಾತ್ಮಕ ವಿಚಾರಣೆಯಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರು ಸೇರ್ಪಡೆಯಾಗುತ್ತದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಸಿದ್ದರಾಮಯ್ಯ ಪತ್ನಿ ಮುಗ್ದೆ. ಅವರ ಮೇಲೆ ಯಾವುದೇ ಆಪಾದನೆಗಳು ಬಾರದೇ ಇರಲಿ ಎಂಬುದು ನನ್ನ ಕಾಳಜಿ. ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿ ಆರೋಪ ಸುಳ್ಳೆಂದು ಸಾಭೀತು ಮಾಡಿ ಯಶಸ್ವಿಯಾಗಲಿ ಎಂದು ಹೇಳಿದರು.