ಪ್ರಾಮಾಣಿಕತೆ, ಬದ್ಧತೆಯಿಂದ ಕರ್ತವ್ಯ ನಿಭಾಯಿಸಲಿ

VISWA
Published on

ಯಲ್ಲಾಪುರ: ಸಾಧನೆಗೆ ಗುರಿ ಮತ್ತು ಸಾಧಿಸುವ ದಾರಿ ಮುಖ್ಯ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಉಪನ್ಯಾಸ ನೀಡಿದರು. ಪ್ರತಿಯೊಂದು ಕೆಲಸವನ್ನು ಸರಿಯಾಗಿ ಯೋಜಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಕರ್ತವ್ಯವನ್ನು ಪ್ರಾಮಾಣಿಕತೆ, ಬದ್ಧತೆ ಮತ್ತು ಪ್ರೀತಿಯಿಂದ ಮಾಡಬೇಕು. ಯಾವುದು ಸರಿ, ಯಾವುದು ತಪ್ಪು ಎನ್ನುವುದರ ವಿವೇಕ ಇರಬೇಕು. ಸಣ್ಣ ತಪ್ಪು ಕೂಡಾ ಗುರಿಯಿಂದ ನಮ್ಮನ್ನು ದೂರ ಕೊಂಡೊಯ್ಯುತ್ತದೆ. ನಮ್ಮ ದೌರ್ಬಲ್ಯದ ವಿರುದ್ಧವಾಗಿ ನಾವೇ ಹೋರಾಡಬೇಕು. ಪರೋಪಕಾರ ಜೀವನದ ಗುರಿಯಾಗಬೇಕು. ಮನುಷ್ಯ ತನ್ನನ್ನು ತಾನು ತಿದ್ದಿಕೊಂಡರೆ ಪ್ರಪಂಚವನ್ನೇ ತಿದ್ದಿಕೊಂಡಂತಾಗುತ್ತದೆ. ಜವಾಬ್ದಾರಿ, ಬದ್ಧತೆ, ನಿರಂತರತೆಯಿಂದ ಸಾಗಬೇಕು. ಆಗ ಯಶಸ್ಸು ಸಾಧ್ಯ ಎಂದರು.

ಆಶ್ರಮದ ಕಾರ್ಯದರ್ಶಿ ಶ್ರೀ ಪರಮಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಋಷಿ ಮುನಿಗಳಿಂದ ಬಂದ ಪರಂಪರೆಯನ್ನು ಅನುಸರಿಸಬೇಕು. ಹೊರಗಿನ ಚಿಂತನೆಗಳನ್ನು ಅವಲೋಕಿಸಿ ಅಳವಡಿಸಿಕೊಳ್ಳ ಬೇಕು. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದರು.

ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ ಭಾರತೀಯ, ಆಡಳಿತ ಮಂಡಳಿ ನಿರ್ದೇಶಕ ವಿಘ್ನೇಶ್ವರ ಗಾಂವ್ಕರ್, ಸದಸ್ಯ ಜಿ.ಎನ್. ಗಾಂವ್ಕರ್ ಇತರರಿದ್ದರು. ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿದರು. ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ನಿರ್ವಹಿಸಿ ವಂದಿಸಿದರು.

ಸಂಸ್ಕಾರ ದೀಕ್ಷೆ:

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸಂಸ್ಕಾರ ದೀಕ್ಷೆ ಕಾರ್ಯಕ್ರಮ ನಡೆಯಿತು. ಉಭಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ, ಸವಣಗೇರಿಯ ಗಣೇಶ ಭಟ್ಟರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net