ರೈತರ ಸಮಸ್ಯೆಗೆ ಸ್ಪಂದಿಸುವ ವ್ಯವಸ್ಥೆ ನಿರ್ಮಾಣವಾಗಲಿ, ಕೃಷಿ ಮಿತ್ರ ಕಾರ್ಡ್ ವಿತರಣೆ

23Rura1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ರೈತರಿಗೆ ಆಧುನಿಕ ಮಾರ್ಗದಲ್ಲಿ ಕೃಷಿ ಮಾಡಲು ಸರ್ಕಾರದಿಂದ ಮಾಹಿತಿ ಒದಗಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ಆಗಬೇಕು ಎಂದು ವಿಶ್ವ ಒಕ್ಕಲಿಗರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ರೋಹನ್ ಗೌಡ ಹೇಳಿದರು.

ತಾಲೂಕಿನ ಪಾಲನಜೋಗಿಹಳ್ಳಿಯ ಕೃಷಿ ಮಿತ್ರ ಕೇಂದ್ರದಲ್ಲಿ ಬುಧವಾರ ರೈತರ ದಿನಾಚರಣೆ ಪ್ರಯುಕ್ತ ಕೃಷಿ ಮಿತ್ರ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು.

ದೇಶದ ಬಹುತೇಕ ರೈತರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರಿಂದಾಗಿ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಅಭಿವೃದ್ಧಿಗಾಗಿ ಸರ್ಕಾರ ಪ್ರತಿ ವರ್ಷ ಲಕ್ಷಾಂತರ ರೂ. ವಿನಿಯೋಗಿಸುತ್ತಿದ್ದರೂ ರೈತರ ಬದುಕು ಚಿಂತಜನಕವಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಪ್ರಾಮಾಣಿಕವಾಗಿ ರೈತರಿಗೆ ತಲುಪುತ್ತಿಲ್ಲ. ಇದರಿಂದ ಸಾಕಷ್ಟು ಯೋಜನೆಗಳು ದಾರಿ ತಪ್ಪಿವೆ. ಕೇವಲ ಹೆಸರಿಗಷ್ಟೇ ಸೀಮಿತವಾಗಿವೆ. ಕೃಷಿ ಮಿತ್ರ ಸಂಸ್ಥೆಯು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಕೃಷಿ ಸಕಲಕರಣೆಗಳು, ಗೊಬ್ಬರ ಬಿತ್ತನೆ ಬೀಜ, ರಾಸಾಯನಿಕ ಹಾಗೂ ಸಾವಯವ ಕೃಷಿಗೆ ಅಗತ್ಯ ಮಾಹಿತಿ ಸಂಪರ್ಕ ಕಲ್ಪಿಸುತ್ತದೆ ಎಂದರು.

ಹೊನ್ನಘಟ್ಟದ ಹಾಲಿನ ಡೇರಿ ಸಂಘದ ಉಪಾಧ್ಯಕ್ಷ ಎಚ್.ಎಸ್. ಮಧುಕುಮಾರ್ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳ ಮಾಹಿತಿ ಹಾಗೂ ಅನುಷ್ಠಾನದ ಕ್ರಮ ರೈತರಿಗೆ ಸಿಗದ ಕಾರಣ ಅನೇಕ ರೈತರು ಇದರಿಂದ ವಂಚಿತರಾಗಿದ್ದಾರೆ ಎಂದರು.

ಹೊನ್ನಘಟ್ಟ ಹಾಲಿನ ಡೇರಿ ಸಂಘದ ಉಪಾಧ್ಯಕ್ಷ ಎಚ್.ಎಸ್ ಮಧುಕುಮಾರ್, ಸಂಸ್ಥೆಯ ನಿರ್ದೇಶಕರಾದ ನಾಗೇಶ್‌ಗೌಡ, ಶಿವಾನಂದ, ಪಿ.ಚೈತ್ರ, ಬಿ.ಮಂಜುಳಾ ಮತ್ತಿತರರು ಇದ್ದರು.

ಸುಮಾರು 40 ಮಂದಿ ರೈತರಿಗೆ ಕೃಷಿ ಮಿತ್ರ ಕಾರ್ಡ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net