

ಹುಕ್ಕೇರಿ: ನೆರೆ ಹಾವಳಿ ಎದುರಿಸಲು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮಂಜುಳಾ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರವಾಹ, ಅತಿವೃಷ್ಟಿ ಹಾಗೂ ಕೋವಿಡ್-19 ಪರಿಸ್ಥಿತಿ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.
ಹಿರಣ್ಯಕೇಶಿ, ಘಟಪ್ರಭಾ ನದಿಯಿಂದ ಪ್ರವಾಹ ಬಾಧಿತ ಪ್ರದೇಶಗಳನ್ನು ಗುರುತಿಸಿ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ಇರುವ ಕಡೆ ಗಂಜಿ ಕೇಂದ್ರ ತೆರೆದು ಜನರನ್ನು ಸ್ಥಳಾಂತರಿಸಲು ರೂಪುರೇಷೆ ಸಿದ್ಧಪಡಿಸಬೇಕು. ಜಾನುವಾರುಗಳಿಗೆ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು. ಆಹಾರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಉದಯ ಕುಡಚಿ, ಉಪತಹಸೀಲ್ದಾರ್ ಸಿ.ಆರ್.ಶೀಗಿಹೊಳಿ, ಕೆ.ಸಿ.ಏಶಿ, ಸಿ.ಎ.ಪಾಟೀಲ, ಶಶಿಕಾಂತ ವಂದಾಳೆ, ವಿನಾಯಕ ಪೂಜಾರ, ಪ್ರಭಾವತಿ ಪಾಟೀಲ, ಬಿ.ಎಲ್.ಸನದಿ, ಸವಿತಾ ಹಲಕಿ, ಭಾರತಿ ನಂದಿಹಳ್ಳಿ, ಪ್ರವೀಣ ಮಾಡ್ಯಾಳ, ಎಚ್.ಎ.ಮಾಹುತ, ರಾಮಚಂದ್ರ ನಾಯ್ಕರ, ಎಂ.ಆರ್.ಕಳ್ಳಿಮನಿ, ಕಂದಾಯ ನಿರೀಕ್ಷಕರಾದ ಎ.ಎಂ.ಕಮತನೂರ, ಸಿ.ಕೆ.ಕಲಕಾಂಬಕರ ಇತರರಿದ್ದರು.