ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಮತ

3
Published on

ಮೈಸೂರು: ಧರ್ಮಕ್ಕೆ ಕಟ್ಟು ಬೀಳದೆ ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಜತೆಗೆ ಸಂವಿಧಾನದ ಆಶಯಕ್ಕೆ ನಿಷ್ಠಾವಂತರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ, ಉರ್ದು ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲೂ ಅಧರ್ಮ ಹಾಗೂ ಅನೀತಿಯನ್ನು ಬೋಧಿಸಿಲ್ಲ. ದ್ವೇಷವನ್ನು ಹರಡಿ ಎಂದು ಹೇಳಿಲ್ಲ. ಆದರೆ ಕೆಲವರು ಧರ್ಮದ ಹೆಸರಿನಲ್ಲಿ ಇತರರ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂದರು.

ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಂವಿಧಾನದ ಆಶಯಕ್ಕೆ ನಿಷ್ಠಾವಂತರಾಗಿರಬೇಕು. ಜೀವನದ ಮೌಲ್ಯಗಳ ಮೇಲೆ ಧರ್ಮ ಸೃಷ್ಠಿಯಾಗಿದೆ. ಹಾಗಾಗಿ ಮನುಷ್ಯರು ಸಾಮರಸ್ಯದಿಂದ ಬದುಕಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಅಲ್ಪ ಸಂಖ್ಯಾತರು, ಬಹುಸಂಖ್ಯಾತರ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದಾರೆ. ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ಪ್ರಸ್ತುತ ಕೋಮುವಾದದ ನೆರಳು ಭಾರತದ ಪ್ರಜಾಪ್ರಭುತ್ವದ ಮೇಲೆ ತನ್ನ ಕಬಂಧ ಬಾಹು ಚಾಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮಲ್ಲರ ಮೇಲಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವರನ್ನು ತಾವೆಲ್ಲರೂ ಬೆಂಬಲಿಸಬೇಕು. ರಾಜಕೀಯ ಸ್ವಾತಂತ್ರ್ಯದಿಂದ ಏಳಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ ಸ್ವಾವಲಂಬನೆ ಅಗತ್ಯವಿದೆ. ಶಿಕ್ಷಣದ ಸವಲತ್ತುಗಳು ಪ್ರತಿಯೊಬ್ಬರಿಗೂ ದೊರಕಬೇಕು. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಅನೇಕ ಸೌಲಭ್ಯಗಳನ್ನು ಎಲ್ಲಾ ವರ್ಗದವರಿಗೂ ದೊರಕಿಸುತ್ತಿದೆ ಎಂದರು.

ಶಾಸಕ ತನ್ವೀರ್‌ಸೇಠ್ ಮಾತನಾಡಿ, ಸಮಾಜ ನಮ್ಮೊಂದಿಗಿದೆ, ಅದರಂತೆ ನಾವೂ ಸಮಾಜದ ಜತೆಗೆ ಇರುವುದನ್ನು ರೂಢಿಸಿಕೊಳ್ಳಬೇಕು. ಯಾರು ಅನ್ಯ ಧರ್ಮಕ್ಕೆ ಗೌರವ ನೀಡುವುದಿಲ್ಲವೋ, ಅವರು ತಮ್ಮ ಧರ್ಮವನ್ನು ಎಂದಿಗೂ ರಕ್ಷಣೆ ಮಾಡಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಹಾಗೂ ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ನಾವು ಶ್ರಮಿಸಲಿದ್ದೇವೆ ಎಂದು ಹೇಳಿದರು.

ಶಾಸಕ ಕೆ.ಹರೀಶ್‌ಗೌಡ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುದಸ್ಸೀರ್, ಉಪಾಧ್ಯಕ್ಷ ಸೈಯದ್ ದಸ್ತಗೀರ್, ಕಾರ್ಯಾಧ್ಯಕ್ಷ ಸೈಯದ್ ನಾಸೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಜೀಜ್ ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net