ಶ್ರೀ ಶಿವಕುಮಾರ ಸ್ವಾಮೀಜಿ ಗುಣಗಳನ್ನು ಅಳವಡಿಸಿಕೊಳ್ಳೋಣ: ಶ್ರೀ ಸಂಗಮೇಶ್ವರ ಸ್ವಾಮೀಜಿ

21_HSN_06
Published on

ಹಾಸನ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಗಂಧದ ಕೋಟೆಯ ವೃತ್ತದಲ್ಲಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತ್ರಿವಿಧ ದಾಸೋಹಿ, ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಗಳ ನೆನಪಿನಲ್ಲಿ ಅನ್ನ ದಾಸೋಹ, ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮ ಕೆಲಸವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಾಡಿನ ಪುಣ್ಯ ಭೂಮಿಯಲ್ಲಿ ಅನೇಕ ಸಂತರು, ಶರಣರು, ತಪಸ್ವಿಗಳು, ಸಿದ್ದಪುರುಷರು ತಮ್ಮ ಕಾಯಕದ ಮೂಲಕ ಜನಸಾಮಾನಸದಲ್ಲಿ ಚಿರಸ್ಥಾಯಿಯಾಗಿ ಬೆಳಗುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿ ಬಡ ಮಕ್ಕಳಿಗೆ ಅನ್ನ ದಾಸೋಹ, ಅಕ್ಷರ, ಅಶ್ರಯ ಕೊಟ್ಟು ಅವರ ಜೀವನದ ಬದುಕು ಪಾವನಗೊಳಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಜೀವನದ ಅದರ್ಶಗಳು, ನಡೆ-ನುಡಿ ನಮಗೆ ಮಾರ್ಗದರ್ಶನವಾಗಿದೆ. ಇಂದು ಶ್ರೀ ಸಿದ್ದಗಂಗಾ ಮಠ ಸೇರಿದಂತೆ ನಾಡಿನ ಎಲ್ಲ ಕಡೆ ಪೂಜೆ, ಅನ್ನ ದಾಸೋಹ, ಆರೋಗ್ಯ ಶಿಬಿರ, ರಕ್ತದಾನ ಮಾಡುವ ಮೂಲಕ ಶ್ರೀಗಳ ಪುಣ್ಯಾರಾಧನೆ ಮಾಡಲಾಗುತ್ತಿದೆ. ಇವರಂತೆ ಆದಿಚುಂಚನಗಿರಿ ಸ್ವಾಮೀಜಿ ಅವರ ಪುಣ್ಯರಾಧನೆ ಸಹ ಇದೆ ತಿಂಗಳು ನಡೆದಿದೆ ಎಂದರು.

ಪುಣ್ಯಾರಾಧನೆಯ ಪೂಜೆಯನ್ನು ಶ್ರೀ ಸಿದ್ದೇಶ್ವರ ದೇವಸ್ಥಾನದ ಅರ್ಚಕರು ನೆರವೇರಿಸಿದರು. ಸಾವಿರಾರು ಜನರು ಪ್ರಸಾದ ಸ್ವೀಕರಿಸಿದರು ಹಾಗೂ ಹಲವಾರು ಜನರು ರಕ್ತದಾನ ಮಾಡಿದರು. ಹಲವರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮ ಅಯೋಜಕರಾದ ಶೇಖರ್, ಮೋಹನ್ ಕುಮಾರ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹಾಸನ ಪ್ರಾಧಿಕಾರದ ಯೋಜನಾಧಿಕಾರಿ ಶಿವಕುಮಾರ್, ಹಿರಿಯ ವಕೀಲ ಆರ್.ಸಿ. ಚನ್ನಬಸವಯ್ಯ, ನಗರಸಭಾ ಮಾಜಿ ಸದಸ್ಯರಾದ ಚಂದ್ರು, ಸುಬ್ರಮಣ್ಯ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಉಪಾಧ್ಯಕ್ಷ ಪುನೀತ್ ಪಟೇಲ್, ಪ್ರಧಾನ ಕಾರ್ಯದರ್ಶಿ ಎಚ್.ವಿ. ಹೇಮಂತ್ ಕುಮಾರ್, ಸಹ ಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ನಿರ್ದೇಶಕರಾದ ಮಯೂರಿ ಲೋಕೇಶ್, ಬಾಳ್ಳು ನಾಗೇಶ್, ಬಿ.ವಿ. ಲತೇಶ್, ಜಿಲ್ಲಾ ಬಿಜೆಪಿ ಮುಖಂಡರಾದ ಎಚ್.ಎನ್. ನಾಗೇಶ್, ವೇಣು ಗೋಪಾಲ್, ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್, ಅರಕಲಗೂಡು ಚಂದ್ರಶೇಖರ್, ಜಿಲ್ಲಾ ವಿಷ್ಣುವರ್ಧನ ಸಂಘದ ಅಧ್ಯಕ್ಷ ಮಹಂತೇಶ್, ವಿಜಯಕುಮಾರ್, ದೇವಿರಯ್ಯ, ಎಂ.ವಿ. ದೇವರಾಜು, ಬಿದರಕೆರೆ ದೇವರಾಜ್, ಯು.ಎಸ್. ಮಲ್ಲಿಕಾರ್ಜುನ. ಯು.ಎಸ್. ಬಸವರಾಜ್, ಸೋಮಶೇಖರ್ ಇತರರು ಪಾಲ್ಗೊಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net