'ಹೈನುಗಾರಿಕೆ ಗಟ್ಟಿಗೊಳಿಸಲು ಸಂಘಗಳು ಶ್ರಮಿಸಲಿ'

15
Published on

ಮೈಸೂರು: ಹೈನುಗಾರಿಕೆ ಗ್ರಾಮೀಣ ಜನರ ಆರ್ಥಿಕ ಬೆನ್ನೆಲುಬಾಗಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಲು ಉತ್ಪಾದಕರ ಸಂಘಗಳು ಶ್ರಮಿಸಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ವಿ.ರಾಜೀವ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಜಿಲ್ಲಾ ಸಹಕಾರಿ ಹಾಲಿ ಉತ್ಪಾದಕರ ಸಂಘಗಳ ಒಕ್ಕೂಟದಿಂದ ಮೈಸೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಕಾರಣಕ್ಕೆ ಗ್ರಾಮೀಣ ಜನತೆ ಹಳ್ಳಿಗಳನ್ನು ತೊರೆದು ನಗರಗಳ ಕಡೆ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ ಜನರಿಗೆ ಆಸರೆಯಾಗುವ ಮೂಲಕ ಹೈನುಗಾರಿಕೆ ಆರ್ಥಿಕತೆಗೆ ಆಧಾರವಾಗಿದೆ ಎಂದರು.
ಹೈನುಗಾರರ ಬದುಕು ಮತ್ತಷ್ಟು ಸುಧಾರಿಸಿಲು ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಥವಾಗಿ ತಲುಪಿಸಬೇಕು. ಇದಕ್ಕೆ ಡೇರಿ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಗುಜರಾತ್‌ನಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆಯಾಗುತ್ತಿದೆ. ಅಮುಲ್ ಹಲವು ಹಾಲಿನ ಉತ್ಪನ್ನಗಳಿಂದ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿದೆ. ಕೆಎಂಎಫ್‌ನ ನಂದಿನಿ ಉತ್ಪನ್ನಗಳು ಹೆಚ್ಚಬೇಕು. ಅದರಿಂದ ದೊರೆಯುವ ಲಾಭ ಹೈನುಗಾರರ ಕೈ ಸೇರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಮಾಜಿ ಅಧ್ಯಕ್ಷ ಕೆ. ಉಮಾಶಂಕರ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ರೀತಿಯ ತರಬೇತಿ ಆಯೋಜನೆ ಮುಖ್ಯವಾಗಿದೆ. ಇದರಿಂದ ಸಂಘಗಳ ಆಡಳಿತ ಸುಧಾರಣೆಯಾಗಿ ಗುಣಾತ್ಮಕ ಹಾಲು ಉತ್ಪಾದನೆಯನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಗುರುಸ್ವಾಮಿ, ಲೀಲಾ ನಾಗರಾಜು, ವೈ ಭೈರಪ್ಪ, ವ್ಯವಸ್ಥಾಪಕ ಎಲ್.ಆರ್.ಕರಿಬಸವರಾಜು, ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ನಿರ್ದೇಶಕ ರೇವಣ್ಣ, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಕೈಸಿಎಂ ಮೈಸೂರು ಪ್ರಾಂಶುಪಾಲ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net