‘ಯುಎಎಸ್-ಬಿ’ಗೆ ಸಮಗ್ರ ಕೃಷಿ ವಿವಿ ಮಾನ್ಯತೆ ಆಗಲಿ

agri alumni
Published on

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವನ್ನು (ಯುಎಎಸ್-ಬಿ) ವಿಭಜಿಸಿ ಮಂಡ್ಯ ಸಮಗ್ರ ಕೃಷಿ ವಿವಿಯನ್ನಾಗಿ ರಚಿಸಿದ ಬಳಿಕ ಮೂಲ ವಿವಿಯ ಕಾರ್ಯಾಚರಣೆಗೆ ಧಕ್ಕೆ ಉಂಟಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಬೆಂಗಳೂರು ಕೃಷಿ ವಿವಿಗೂ ಸಮಗ್ರ ರೂಪದ ಮಾನ್ಯತೆ ನೀಡಿ ಮೊದಲಿನಂತೆ ಕಾರ್ಯನಿರ್ವಹಿಸುವ ನಿರ್ಧಾರವನ್ನು ಪ್ರಕಟಿಸಬೇಕು ಎಂದು ವಿವಿಯ ಆಡಳಿತ ಮಂಡಳಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಂಘಗಳು ಆಗ್ರಹಿಸಿವೆ.

ಬೆಂಗಳೂರು ಕೃಷಿ ವಿವಿಯು 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕೃಷಿ ಪದವೀಧರನ್ನು ತಯಾರು ಮಾಡುವ ಜತೆಗೆ ಸಂಶೋಧನೆ, ವಿಸ್ತರಣೆ, ರೈತರಿಗೆ ತರಬೇತಿ ಸೇರಿ ವಿವಿಧ ಆಯಾಯಗಳಲ್ಲಿ ಕೆಲಸ ಮಾಡುತ್ತಿದೆ. ಇದನ್ನು ಪರಿಗಣಿಸಿದೆ ವಿಭಜನೆ ನೆಪದಲ್ಲಿ ಮಂಡ್ಯದಲ್ಲಿ ಹೊಸ ವಿವಿ ಸ್ಥಾಪಿಸಲು ಮಣೆ ಹಾಕಲಾಗಿದೆ. ತಜ್ಞರ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸು ಬದಿಗೊತ್ತಿ ಮೂಲ ವಿವಿ ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಹಾಗಾಗಿ ಮಂಡ್ಯ ವಿವಿ ಮಾದರಿಯಲ್ಲಿ ಬೆಂ. ಕೃಷಿ ವಿವಿಗೂ ಸಮಗ್ರ ವಿಶ್ವವಿದ್ಯಾಲಯವಾಗಿ ಕೆಲಸ ಮಾಡಲು ಆದೇಶ ಹೊರಡಿಸಬೇಕು ಎಂದು ವಿವಿಯ ಆಡಳಿತ ಮಂಡಳಿ ಸದಸ್ಯ ಡಾ. ಟಿ.ಕೆ.ಪ್ರಭಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ದೇಶದ 75 ಕೃಷಿ ವಿವಿ/ಕಾಲೇಜುಗಳ ಪೈಕಿಯುಎಎಸ್-ಬಿ 4ನೇ ಸ್ಥಾನದಲ್ಲಿದೆ. ಈಗ ವಿವಿ ವ್ಯಾಪ್ತಿಯನ್ನು ಕುಗ್ಗಿಸಿರುವುದರಿಂದ ಭವಿಷ್ಯದ ಪ್ರಗತಿಗೆ ಅಡ್ಡಿಯಾಗಲಿದೆ. ಸಂಶೋಧನೆ ಸೇರಿ ವಿವಿಧ ವಿಭಾಗಗಳು ಬೇರೆಡೆಗೆ ಹಂಚಿಹೋಗುವುದರಿಂದ ರೈತರಿಗೆ ಸಮಗ್ರ ಕೃಷಿಯ ಪರಿಕಲ್ಪನೆ ನೀಡಲು ಸಾಧ್ಯವಾಗದು. ರೈತರು ಕೃಷಿ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆಯ ಚಟುವಟಿಕೆಗಳನ್ನು ನಡೆಸಿ ಜೀವನ ನಡೆಸುತ್ತಾರೆ. ಇದಕ್ಕಾಗಿ ವಿವಿ ಮೇಲೆ ಅವಲಂಬಿಸುವ ಕೃಷಿಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗದು. ಈ ಸೂಕ್ಷ್ಮವನ್ನು ಅರಿತು ಸರ್ಕಾರ ಮೂಲ ವಿವಿಯನ್ನು ಸದೃಢಗೊಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಯುಎಎಸ್-ಬಿ ಬೋಧಕರ ಸಂಘದ ಅಧ್ಯಕ್ಷ ಡಾ. ಕೆ.ಎಸ್.ರಾಜಶೇಖರಪ್ಪ, ನೌಕರರ ಸಂಘದ ಅಧ್ಯಕ್ಷ ಬಿ.ಶ್ರೀಕಾಂತ್ ಹಾಜರಿದ್ದರು.

ಶೀಘ್ರ ರಾಜ್ಯಪಾಲರಿಗೆ ಮನವಿ ಸಲ್ಲಿಕೆ:

ವಿವಿ ವಿಭಜನೆಗಾಗಿ ರಚಿಸಿದ್ದ ಸಮಿತಿಯು ಹೊಸ ಹಾಗೂ ಮೂಲ ವಿವಿಗೆಳೆರಡನ್ನೂ ಸಮಗ್ರ ರೂಪದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂಬ ಶಿಫಾರಸು ಮಾಡಿತ್ತು. ಆದರೀಗ ಮಂಡ್ಯ ವಿವಿಗೆ ಮಾತ್ರ ಸಮಗ್ರ ಮಾನ್ಯತೆ ನೀಡಲಾಗಿದೆ. ಈ ತಾರತಮ್ಯ ನಿವಾರಿಸುವಂತೆ ಕೋರಿ ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಡಾ. ಟಿ.ಕೆ.ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.

ಸರ್ಕಾರ ಹೊಸದಾಗಿ ರಚಿಸಿರುವ ಮಂಡ್ಯ ವಿವಿಗೆ ಬಗ್ಗೆ ನಮ್ಮ ತಕರಾರು ಇಲ್ಲ. ಬೆಂಗಳೂರು ಕೃಷಿ ವಿವಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ರೀತಿ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಯುಎಎಸ್-ಬಿ ವ್ಯಾಪ್ತಿಯಲ್ಲೇ ಚಿತ್ರದುರ್ಗ ಜಿಲ್ಲೆಯನ್ನು ಉಳಿಸಿಕೊಂಡೇ ಸಮಗ್ರ ವಿವಿಯನ್ನಾಗಿಸುವ ನಿರ್ಧಾರ ಕೈಗೊಳ್ಳಲಿ.

- ಡಾ. ಎಚ್.ಎಲ್.ಹರೀಶ್, ಯುಎಎಸ್-ಬಿ ಅಲುಮ್ನಿ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net