ಎರಡೂ ಪಕ್ಷದ ಭ್ರಷ್ಟಾಚಾರ ತನಿಖೆಯಾಗಲಿ: ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು

23CBP3h
Published on

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧಮ್, ತಾಕತ್ತಿದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗದ ತನಿಖೆಗೆ ಒಪ್ಪಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ನಗರದ ಸಿವಿವಿ ಕ್ಯಾಂಪಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಆಡಳಿತದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ. ಒಂದೇ ವೇದಿಕೆಯಲ್ಲಿ ಚರ್ಚಿಸಲು ಪಕ್ಷ ಸಿದ್ಧ. ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು. ಆದರೆ, ಇದಕ್ಕೆ ಬಿಜೆಪಿ ಮುಂದೆ ಬರುತ್ತಿಲ್ಲ. ಸಿಎಂ ಬಾಯಿ ಮಾತಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಹಲವು ರಾಜ್ಯಗಳ ಮಾದರಿಯಲ್ಲಿ ಎಸಿಬಿ ರಚಿಸಲಾಯಿತೇ ಹೊರತು ಲೋಕಾಯುಕ್ತವನ್ನು ಮುಚ್ಚಲಿಲ್ಲ. ಎರಡೂ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದನ್ನು ಮರೆಮಾಚಿ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಅಧಿಕಾರಕ್ಕೆ ಬಂದ ತಕ್ಷಣ ಏಕೆ ರದ್ದುಪಡಿಸಿ, ಬದಲಾಯಿಸುವ ಗೋಜಿಗೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಭ್ರಷ್ಟಾಚಾರವೆಸಗಿದ್ದಲ್ಲಿ ಐದು ವರ್ಷಗಳ ಹಿಂದೆ ಏಕೆ ಮಾತನಾಡಲಿಲ್ಲ. ಈಗ ಬಿಜೆಪಿಯ ತಪ್ಪುಗಳನ್ನು ಮುಚ್ಚಿಕೊಳ್ಳಲು ಆರೋಪ ಹೊರಿಸಲಾಗುತ್ತಿದೆ. ಕರೊನಾ ನಿರ್ವಹಣೆಯಲ್ಲಿ ಹಣ ಲೂಟಿ, ಪ್ರತಿ ಕೆಲಸದಲ್ಲೂ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ವಸೂಲಿ, ಪಿಎಸ್‌ಐ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಗರಣವು ಬಿಜೆಪಿ ದೊಡ್ಡ ಸಾಧನೆಯಾಗಿದೆ ಎಂದರು. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಬಿ.ವಿ.ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಸಂಸದ ಚಂದ್ರಪ್ಪ, ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಆರ್.ರಾಮಲಿಂಗಾರೆಡ್ಡಿ, ವಿ.ಮುನಿಯಪ್ಪ, ಸಿ.ಬಿ.ಕೃಷ್ಣ ಭೈರೇಗೌಡ, ಎನ್.ಎಚ್.ಶಿವಶಂಕರರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ನಾಗರಾಜ್ ಯಾದವ್, ಮಾಜಿ ಶಾಸಕರಾದ ಡಾ ಎಂ.ಸಿ.ಸುಧಾಕರ್, ಕೊತ್ತೂರು ಮಂಜುನಾಥ್, ಎನ್.ಸಂಪಂಗಿ, ನಾಗರಾಜ್, ನಜೀರ್ ಅಹಮದ್, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಇದ್ದರು.

ಚಿಕ್ಕಬಳ್ಳಾಪುರಕ್ಕೆ ಸೂಕ್ತ ಅಭ್ಯರ್ಥಿ
ಈಗಾಗಲೇ ಪಕ್ಷದಿಂದ ಸರ್ವೆ ನಡೆಸಲಾಗಿದೆ. ಸಚಿವ ಸುಧಾಕರ್ ಅವರನ್ನು ಸೋಲಿಸುವ ಸೂಕ್ತ ಅಭ್ಯರ್ಥಿಯನ್ನು ಚುನಾವಣ ಕಣಕ್ಕಿಳಿಸಲಾಗುತ್ತದೆ. ಇದರಲ್ಲಿ ಸ್ಥಳೀಯರ ಮಾತಿಗೆ ಮನ್ನಣೆ ನೀಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ತಿಳಿಸಿದರು.

ನೀರಾವರಿ ಯೋಜನೆ ಸ್ಥಗಿತ
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗಳ ಅನುಷ್ಠಾನವು, ಕಾಂಗ್ರೆಸ್ ಕೈಗೊಂಡಿದ್ದ ಕೆಲಸಗಳ ಹಂತದಲ್ಲಿಯೇ ಸ್ಥಗಿತಗೊಂಡಿವೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಟೀಕಿಸಿದರು.

ಒಗ್ಗಟ್ಟಿನ ಸಮಾಜ ಒಡೆಯುತ್ತಿದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕಕ್ಕೆ ಕಳಂಕಿತ ರಾಜ್ಯ ಎಂಬ ಕೆಟ್ಟ ಹೆಸರು ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿನ ವ್ಯತ್ಯಾಸವನ್ನು ಜನರು ಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಕೊಟ್ಟ 169 ಭರವಸೆಗಳ ಪೈಕಿ 165 ಭರವಸೆ ಈಡೇರಿಸಲಾಯಿತು. ಆದರೆ, ಬಿಜೆಪಿಯ ರೈತರ ಆದಾಯ ದ್ವಿಗುಣಗೊಳಿಸುವ ಮಾತು ಸಾಕಾರಗೊಂಡಿದೆಯೇ? ಎಂದು ಪ್ರಶ್ನಿಸಿದರು. ಮೊದಲಿನಿಂದಲೂ ಬಿಜೆಪಿಯು ಜನರ ಸೂಕ್ಷ್ಮ ಭಾವನೆಯ ಮೇಲೆ ರಾಜಕಾರಣ ಮಾಡುತ್ತಿದೆ. ಒಗ್ಗಟ್ಟಿನ ಸಮಾಜವನ್ನು ಒಡೆಯುತ್ತಿದೆ. ಸಿದ್ದರಾಮಯ್ಯ ಸೇರಿದಂತೆ ನಾವೆಲ್ಲರೂ ಹಿಂದುಗಳೇ. ಓಂಶಕ್ತಿ ಜತೆಗೆ ನಾನಾ ದೇವರುಗಳನ್ನು ಪೂಜಿಸಲಾಗುತ್ತದೆ. ಆದರೆ, ಎಲ್ಲರೂ ಒಂದೇ ಎಂಬುದು ನಮ್ಮ ತತ್ವವಾಗಿದೆ ಎಂದರು. ಬ್ರಿಟಿಷರನ್ನು ದೇಶದಿಂದ ಓಡಿಸುವ ಹೋರಾಟಕ್ಕೆ ಕಿಚ್ಚು ಹಚ್ಚಿದ ಬೆಳಗಾವಿಯಿಂದ ಪ್ರಾರಂಭವಾದ ಪ್ರಜಾಧ್ವನಿ ಯಾತ್ರೆಯ ಸಂಚಾರವು ಈಗಾಗಲೇ 18 ಜಿಲ್ಲೆಗಳಲ್ಲಿ ಮುಗಿದಿದೆ. ಇದೇ ವೇಳೆ ಜನರಿಗೆ ನೀಡಿದ ಭರವಸೆ ಈಡೇರಿಸದಿದ್ದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯಲಾಗುವುದು. ಇದು ಗಾಳಿ ಮಾತಲ್ಲ ಎಂದರು.

ಶಿಳ್ಳೆಗಳ ಪೈಪೋಟಿ
ಪ್ರತಿ ಬಾರಿ ಹೆಸರು ಪ್ರಸ್ತಾಪವಾಗುತ್ತಿದ್ದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳ ನಡುವೆ ವೇದಿಕೆ ಕಾರ್ಯಕ್ರಮದಲ್ಲಿ ಶಿಳ್ಳೆ, ಜೈಕಾರಗಳ ಪೈಪೋಟಿ ಕಂಡು ಬಂತು. ಹಾಗೆಯೇ ಹಾಲಿ ಮತ್ತು ಮಾಜಿ ಶಾಸಕರ ಕೂಗಿನ ಆರ್ಭಟವು ಸದ್ದು ಮಾಡಿತು. ಸಂಘಟಕರು ಭಾಷಣದ ವೇಳೆ ಸುಮ್ಮನಿರಲು ಹಲವು ಬಾರಿ ಮನವಿ ಮಾಡಿದರೂ ಕಿವಿಗೊಡಲಿಲ್ಲ. ಒಂದು ಹಂತದಲ್ಲಿ ಸ್ವತಃ ಕೆಪಿಸಿಸಿ ಅಧ್ಯಕ್ಷರು ವ್ಯಕ್ತಿ ಆರಾಧನೆಯ ಉದ್ದೇಶದಲ್ಲಿ ಕಿರುಚಿದರೆ ಮಾತನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲಿ ಬೇರೆ ಯೋಚನೆಯಲ್ಲಿ ಮಾತನಾಡುತ್ತಿರುವಾಗ ನಿಮ್ಮ ತಲೆಗಳಲ್ಲಿ ಏನಿದೆ ಎಂಬುದು ಗೊತ್ತಿದೆ ಎಂದರು.

ಮುಖ್ಯಮಂತ್ರಿ ಯಾರಾಗುತ್ತೀರೋ ನೀರು ಕೊಡಿ

ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರಲ್ಲಿ ಸಿಎಂ ಯಾರಾಗುತ್ತೀರೋ? ಏನೋ, ಚಿಕ್ಕಬಳ್ಳಾಪುರ ಭಾಗಕ್ಕೆ ಆಂಧ್ರದ ಹಿಂದೂಪುರದಿಂದ ನೀರು ಹರಿಸುವುದಕ್ಕೆ ಹಾಗೂ ಎತ್ತಿನಹೊಳೆ ಸೇರಿದಂತೆ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸಲಹೆ ನೀಡಿದರು. ಪ್ರಜಾಧ್ವನಿಯು ಪಕ್ಷದ ಉತ್ಸಾಹವನ್ನು ಹೆಚ್ಚಿಸಿದೆ. ಇದರಿಂದ ರಾಜ್ಯದಲ್ಲಿ
ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರ ಜತೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಯಲ್ಲೂ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸಚಿವ ಡಾ.ಸುಧಾಕರ್ ವಿರುದ್ಧ ಕಿಡಿ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕರೊನಾ ನಿರ್ವಹಣೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕರೊನಾ ಸಂದರ್ಭದಲ್ಲಿ ಹಾಸಿಗೆ, ಆಕ್ಸಿಜನ್, ಪರಿಕರಗಳ ಖರೀದಿ ಸೇರಿದಂತೆ ಪ್ರತಿಯೊಂದರಲ್ಲೂ ಲೂಟಿ ಹೊಡೆಯಲಾಯಿತು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನರು ಮೃತಪಟ್ಟಾಗ ಸುಳ್ಳು ಹೇಳಲಾಯಿತು ಎಂದು ಟೀಕಿಸಿದರು. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಸುಧಾಕರ್. ಹಿಂದೆ ಪಕ್ಷದಲ್ಲಿದ್ದ ಸಂದರ್ಭದಲ್ಲಿನ ಭ್ರಷ್ಟಾಚಾರದ ಬಗ್ಗೆ ಬಿಜೆಪಿಗೆ ಹೋಗಿ ಟೀಕಿಸುತ್ತಿದ್ದು, ಅವರು ಎಂಬಿಬಿಎಸ್ ಓದಿ ಉತ್ತೀರ್ಣನಾಗಿದ್ದೋ ಅಥವಾ ನಕಲು ಮಾಡಿಯೋ ಎಂದು ಪ್ರಶ್ನಿಸಿದರು.

ಬಿಜೆಪಿ ಪಾಪದ ಪುರಾಣ ಪುಸ್ತಕ
ವಿವಿಧ ಹುದ್ದೆಗಳ ನೇಮಕಾತಿ ಮತ್ತು ನಿಯೋಜನೆಗೆ ನಿಗದಿಪಡಿಸಿದ್ದ ಲಂಚ, ವಿವಿಧ ಹಗರಣಗಳಿಗೆ ಸಂಬಂಧಿಸಿದಂತೆ, ಸ್ವತಃ ಬಿಜೆಪಿ ಸಚಿವರು ಮತ್ತು ನಾಯಕರು ಹೇಳಿದ್ದನ್ನು ಪ್ರಸ್ತಾಪಿಸಿದ ಅವ್ಯವಹಾರಗಳ ಮಾಹಿತಿಯನ್ನೊಳಗೊಂಡ ಬಿಜೆಪಿ ಪಾಪದ ಪುರಾಣ ಪುಸ್ತಕ ಬಿಡುಗಡೆಗೊಳಿಸಿ, ಜನರಿಗೆ ವಾಸ್ತವಾಂಶವನ್ನು ತಿಳಿಸಲಾಗುತ್ತದೆ. ಮಾನಹಾನಿ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡುತ್ತಿದ್ದು, ಇದಕ್ಕೆ ಜಗ್ಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

ಇವರು ನಮ್ಮ ಹುಲಿಗಳು
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಡಾ ಎಂ.ಸಿ.ಸುಧಾಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷರು ಹುಲಿಗಳಿಗೆ ಹೋಲಿಸಿದರು. ಇಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎರಡು ಹುಲಿಗಳು ನೆರವು ನೀಡಿದವು ಎಂದರು.

ಒಂದೇ ವಾಕ್ಯದಲ್ಲಿ ಅಂತ್ಯ
ಕಾರ್ಯಕ್ರಮ ವಿಳಂಬವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್, ಮತ್ತೊಮ್ಮೆ ಮಾತನಾಡುವುದಾಗಿ ಹೇಳಿ ಭಾಷಣವನ್ನು ಮುಗಿಸಿದರು.

ವರಿಷ್ಠರ ಒಲವು ಗಳಿಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗ ನಾಯಕರ ಮೂಲಕ ಈ ಭಾಗದಲ್ಲಿ ಆಂತರಿಕವಾಗಿ ಪ್ರತ್ಯೇಕ ರಾಜಕಾರಣ ಚಟುವಟಿಕೆಯನ್ನು ಜೀವಂತವಾಗಿಟ್ಟಿದ್ದಾರೆ. ಇದರಿಂದ ಇಲ್ಲಿನ ಆಕಾಂಕ್ಷಿಗಳು ಒಬ್ಬೊಬ್ಬರ ಹೆಸರನ್ನು ಹೇಳಿಕೊಂಡು ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಇದು ಒಂದು ಪಕ್ಷದಲ್ಲಿ ನಾನಾ ಬಣಗಳ ಸೃಷ್ಟಿಗೆ ಕಾರಣವಾಗಿವೆ. ಇದರ ನಡುವೆ ಹೊರ ಭಾಗದಲ್ಲಿ ಪಕ್ಷದ ಪ್ರಚಾರ, ಸಂಘಟನೆ ಮತ್ತು ವ್ಯವಸ್ಥೆಯಲ್ಲಿ ಬೇರೆ ಬೇರೆಯಾಗಿ ಶಕ್ತಿ ಪ್ರದರ್ಶಿಸುತ್ತಿದ್ದರೂ ವೇದಿಕೆ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಾಮೂಹಿಕ ನಾಯಕತ್ವ, ವರಿಷ್ಠ ನಿಲುವಿಗೆ ಬದ್ಧ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಭರವಸೆಯಂತೆ ರಾಜ್ಯದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ, ಈಗ ಇರುವ ಉದ್ಯೋಗಗಳನ್ನೇ ಸಾಮೂಹಿಕವಾಗಿ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ.

ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net