

ಹುಬ್ಬಳ್ಳಿ: ಸಮಯದ ಕಲ್ಪನೆ ನಮಗೆ ಅಷ್ಟೊಂದಿಲ್ಲ. ಆದರೆ, ಸಮಯವೇ ದೇವರಾಗಬೇಕು. ಅಂದಾಗ ಮಾತ್ರ ನೀವು ಮಾಡು ಪೂಜೆ, ಪುನಸ್ಕಾರ, ಪಾದಯಾತ್ರೆಗಳು ಆತನಿಗೆ ಸಲ್ಲುತ್ತವೆ ಎಂದು ತೋಂಟದಾರ್ಯಮಠ ಮುಂಡರಗಿ ಹಾಘೂ ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣ ಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿಯ ಉಣಕಲ್ಲ ಹೊಸಮಠದ ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿರುವ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಭಾನುವಾರ ಆಶೀರ್ವಚನ ನೀಡಿದರು.
ನಾವು ಕೂಡಿಟ್ಟ ಸಂಪತ್ತಿಗೂ ಸಮಯವೇ ಕಾರಣ. ಸಮಯಕ್ಕೆ ಸರಿಯಾಗಿ ಮಾಡಿದ ಪ್ರಯತ್ನಕ್ಕೆ ದೇವರು ಕೊಟ್ಟ ಫಲವದು. ಹಾಗಾಗಿಯೇ ಸಮಯವೇ ಶಕ್ತಿ ಮತ್ತು ಸಾವು ಎಂದರು.
ದೇವರು ನಮಗೆ ಸಮಯದ ಜತೆಗೆ ಸತ್ಯಶುದ್ಧ ಆರೋಗ್ಯವನ್ನೂ ಕೊಟ್ಟಿದ್ದಾನೆ. ಅರಿವಿನ ಜಾಗೃತಿ ಹೊಂದಿದ್ದರೆ, ಇವೆಲ್ಲವೂ ಸುಲಭ ಸಾಧ್ಯವಾಗಲಿದೆ. ಹೊಟ್ಟೆಪಾಡಿನ ಶಿಕ್ಷಣಕ್ಕಿಂತ ಅಂತರಂಗದ ಜ್ಞಾನ ದೊಡ್ಡದು ಎಂದವರು ಅಭಿಪ್ರಾಯಪಟ್ಟರು.
ರುದ್ರಾಕ್ಷಿಮಠದ ರ್ಶರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನ ಪಾವನ ಆಗಬೇಕಾದರೆ, ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಗುರುವಿನ ಮಕ್ಕಳಾಗದವರಿಗೆ ಮೋಕ್ಷ ಇಲ್ಲ. ಗುರು ದೀಕ್ಷೆ ಪಡೆಯದವರು, ಸೇವೆ ಮಾಡದವರು ಮುಮುಕ್ಷುಗಳಲ್ಲ ಎಂದರು.
ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳು ಹೊಸಮಠ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ನಾವು ಹಾಕಿಕೊಟ್ಟ ಮಾರ್ಗದಲ್ಲಿ ಮಕ್ಕಳು ಹೋಗುತ್ತಿಲ್ಲ. ಅವರ ಮಾರ್ಗದಲ್ಲಿ ನಡೆಯುವಂಥ ಕೆಟ್ಟ ಕಾಲದಲ್ಲಿ ನಾವಿದ್ದೇವೆ. ಸಂಸ್ಕೃತಿ, ಸಂಸ್ಕಾರ ಕಲಿಸುವ ಅಗತ್ಯ ಈಗ ಇದೆ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕಿ ದಯಾಶೀಲ್ ಮಾತನಾಡಿದರು. ಚೇತನ ಬಿಜಿನೆಸ್ ಸ್ಕೂಲ್‌ನ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಠದ ಅಭಿವೃದ್ಧಿಗೆ ಕೊಟ್ಟ 5 ಲಕ್ಷ ರೂ. ಚೆಕ್ ಅನ್ನು ದಯಾಶೀಲ್ ಅವರು ರಾಜಣ್ಣ ಕೊರವಿ ಅವರಿಗೆ ಹಸ್ತಾಂತರಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರದೀಪ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ಮಾರುತಿ ಶೆಟ್ಟಿ, ಪ್ರಮುಖರಾದ ಸಿ.ಬಿ. ಮರಿಗೌಡರು, ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ, ಎಸ್.ಐ. ನೇಕಾರ ಇತರರು ಇದ್ದರು.