ಕಲಾವಿದರಿಗೆ ಉಳ್ಳವರು ನೆರವಾಗಲಿ

08kkr1( 4-25 nataka
ಕಿಕ್ಕೇರಿಯ ಕಿಕ್ಕೇರಮ್ಮ ದೇಗುಲ ಆವರಣದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಸಮಾರಂಭದಲ್ಲಿ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿದರು. ಚಟ್ಟೇನಹಳ್ಳಿ ನಾಗರಾಜು, ಮಂಜೇಗೌಡ, ಚಂದ್ರು, ನಿಂಗರಾಜು, ಶ್ಯಾಮಣ್ಣ, ಆನಂದಕುಮಾರ್, ಪೂರ್ಣಚಂದ್ರತೇಜಸ್ವಿ ಮತ್ತಿತರರಿದ್ದರು.
Published on

ಕಿಕ್ಕೇರಿ: ಕಲೆಯ ಜೀವಾತ್ಮವಾಗಿರುವ ಕಲಾವಿದನ ಬದುಕು ಹಸನಾಗಲು ಆಸರೆ ಅವಶ್ಯವಿದೆ ಎಂದು ಆರ್‌ಟಿಒ ಅಧಿಕಾರಿಗಳ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.

ಇಲ್ಲಿನ ಕಿಕ್ಕೇರಮ್ಮ ದೇಗುಲ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಸಮಾರಂಭದಲ್ಲಿ ಮಾತನಾಡಿ, ಕಲೆ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿ. ಯಾವುದೇ ಫಲಾಪೇಕ್ಷೆ ಇಲ್ಲದೆ ಕಷ್ಟಪಟ್ಟು ದುಡಿದ ಹಣವನ್ನು ಕ್ರೋಢೀಕರಿಸಿಕೊಂಟು ನಾಟಕ ಮಾಡುವ ಗೀಳು ಇಲ್ಲಿನ ಜನರಲ್ಲಿದೆ. ಹತ್ತಾರು ಕಿ.ಮೀ. ದೂರವಾದರೂ ನಾಟಕ ನೋಡಬೇಕು ಎನ್ನುವ ಹಂಬಲ ಇಲ್ಲಿನ ಜನರಲ್ಲಿದೆ. ಕಲೆ ಉಳಿಯಲು ಇಲ್ಲಿನ ಮುಗ್ಧ ಮನಸ್ಸುಗಳೇ ಸಾಕ್ಷಿಯಾಗಿದೆ ಎಂದರು.

ಪೌರಾಣಿಕ ನಾಟಕ ಎಂದರೆ ಬಲು ದುಬಾರಿ. ಸೀನರಿ, ಅಲಂಕಾರ ಹೀಗೆ ಲಕ್ಷಗಟ್ಟಲೆ ಹಣ ಬೇಕಿದೆ. ಸಾಲ ಮಾಡಿಕೊಂಡಾದರೂ ನಾಟಕ ಮಾಡುವ ಹಂಬಲ ಬಹುತೇಕರಲ್ಲಿದೆ. ಇಂತಹ ಕಲಾವಿದರಿಗೆ ಉಳ್ಳವರು ನೆರವು ನೀಡಲು ಮುಂದಾಗಬೇಕು. ನಶಿಸುತ್ತಿರುವ ಕಲೆಗಳನ್ನು ಜೋಪಾನ ಮಾಡುವುದು ಎಲ್ಲರ ಕರ್ತವ್ಯ ಎಂದರು.

ಹಿಂದೆ ಯಾವುದೇ ಮನೋರಂಜನೆ ಇಲ್ಲವಾಗಿತ್ತು. ಹಳ್ಳಿಗಳಲ್ಲಿ ಕುರುಕ್ಷೇತ್ರ, ರಾಮಾಯಣ, ಶನಿಪ್ರಭಾವ ನಾಟಕಗಳೇ ಮನೋರಂಜನೆ ಜತೆ ಗ್ರಾಮದ ಐಕ್ಯತೆ, ಒಗ್ಗಟ್ಟು, ಸಾಮರಸ್ಯ ಎಲ್ಲವನ್ನು ಬೆಸೆಯುವ ಕೊಂಡಿಯಾಗಿತ್ತು. ಬಲು ಶ್ರದ್ಧೆಯಿಂದ ನಾಟಕಾಭಿನಯ ಕಲಿತು ಜನರೊಂದಿಗೆ ಬೆರೆತು ನಾಟಕ ಪ್ರದರ್ಶಿಸುವ ಕಾಲವಿತ್ತು. ನೆಂಟರಿಷ್ಟರು, ಅಭಿಮಾನಿಗಳು ಹಾರ ತುರಾಯಿ, ಹಣ ನೀಡಿ ಉತ್ತೇಜಿಸುತ್ತಿದ್ದರು. ಇಂತಹ ಉತ್ತೇಜನಗಳು ಸರ್ಕಾರದಿಂದ ಹೆಚ್ಚು ಆಗಬೇಕಿದೆ. ಹಿರಿಯ ಕಲಾವಿದರನ್ನು ಗುರ್ತಿಸಿ ತ್ವರಿತವಾಗಿ ಮಾಸಾಶನದಂತಹ ಅಗತ್ಯ ಸೇವೆ ಕಲ್ಪಿಸಲು ಮುಂದಾಗಬೇಕಿದೆ ಎಂದು ನುಡಿದರು.

ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಲು ಮಳೆ, ಬಿಸಿಲು, ಗಾಳಿಯಿಂದ ರಕ್ಷಣೆ ನೀಡಲು ಸೂಕ್ತವಾದ ರಂಗಮಂದಿರವನ್ನು ಪ್ರತಿ ಗ್ರಾಮಗಳಲ್ಲಿ ನಿರ್ಮಿಸಲು ಸರ್ಕಾರ, ದಾನಿಗಳು ಮುಂದಾಗಬೇಕು ಎಂದು ಆಶಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್. ಧರ್ಮಪ್ಪ ನೇತೃತ್ವದಲ್ಲಿ ಜರುಗಿದ ನಾಟಕದಲ್ಲಿ ಕಲಾವಿದರು ಉತ್ತಮ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾದರು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್. ಧರ್ಮಪ್ಪ, ಹಿರಿಯ ಕಲಾವಿದ ರಾಜಣ್ಣ, ಚಟ್ಟೇನಹಳ್ಳಿ ನಾಗರಾಜು, ಜಿಪಂ ಮಾಜಿ ಸದಸ್ಯ ಮಂಜೇಗೌಡ, ಆನೆಗೊಳ ಕೆ.ಆರ್.ವೆಂಕಟೇಶ್, ಪಟೇಲ್ ಸಣ್ಣೇಗೌಡ, ನಿಂಗರಾಜು, ಚಂದ್ರೇಗೌಡ, ತಾಪಂ ಮಾಜಿ ಸದಸ್ಯ ಶ್ಯಾಮಣ್ಣ, ತಾ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆನಂದಕುಮಾರ್, ಪ್ರಾ. ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net