ಕೆಲಸದ ಬಗ್ಗೆ ಕಳಕಳಿ ಇಲ್ಲದವರು ಬೇರೆ ಜಾಗ ನೋಡಿಕೊಳ್ಳಲಿ

PDO MEETING
Published on

ಹಾನಗಲ್ಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿತ್ಯವೂ ವಾರ್ಡ್ ಭೇಟಿ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಶುಚಿತ್ವ, ನೈರ್ಮಲ್ಯ ಕಾಪಾಡಿಕೊಳ್ಳಬೇಕು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕಿನ ಪಿಡಿಒಗಳಿಗೆ ಸೂಚನೆ ನೀಡಿದ ಶಾಸಕ ಶ್ರೀನಿವಾಸ ಮಾನೆ, ಕೆಲಸದ ಬಗೆಗೆ ಕಳಕಳಿ ಇಲ್ಲದವರು ಬೇರೆ ಜಾಗ ನೋಡಿಕೊಳ್ಳಲು ಅಡ್ಡಿಯಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕಿನ ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಭಾವನೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕಾಳಜಿ ವಹಿಸಬೇಕು. ಈ ಕುರಿತು ಯಾವುದೇ ದೂರು ಕೇಳಿ ಬಂದರೆ ಕ್ರಮಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಮಾನೆ ಸೂಚಿಸಿದರು.

ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಬಾಕಿ ಉಳಿದ ತೆರಿಗೆ ವಸೂಲಿಗೆ ಮುಂದಾಗಬೇಕು. ಪ್ರತಿಯೊಬ್ಬರೂ ವಸೂಲಿಗೆ ನಿರ್ದಿಷ್ಟ ಗುರಿ ನಿಗದಿಪಡಿಸಿಕೊಳ್ಳಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಗಟಾರು ನಿರ್ಮಾಣ ಎಲ್ಲೆಲ್ಲಿ ಕೈಗೆತ್ತಿಕೊಳ್ಳಬೇಕು ಎನ್ನುವುದರ ಸಮಗ್ರ ವರದಿ ಸಿದ್ಧಪಡಿಸಿ ಕೊಡಿ. ಮನೆ-ಮನೆಗೆ ಗಂಗೆ ಯೋಜನೆಗಾಗಿ ಕೆಲವೆಡೆ ರಸ್ತೆ ಅಗೆಯಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿ, ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜಿಪಿಎಸ್ ವಿಳಂಬದಿಂದಾಗಿ ಇನ್ನೂ ಹಲವು ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿಲ್ಲ. ಮನೆ ನಿರ್ಮಾಣಕ್ಕೆ ಜಿಪಿಎಸ್‌ನಿಂದ ಅಡಚಣೆ ಉಂಟಾಗಬಾರದು. ಎಲ್ಲ ನಾಲ್ಕೂ ಹಂತಗಳಲ್ಲಿ ಜಿಪಿಎಸ್ ಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದರು.

ತಾಲೂಕಿನ ಕೆಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿವಿಧ ಆಶ್ರಯ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಕೂಡಲೇ ಪೂರ್ಣಗೊಳಿಸಿ. ಇಲ್ಲದಿದ್ದರೆ ತಾಲೂಕು ಪಂಚಾಯಿತಿಗೆ ಹಸ್ತಾಂತರಿಸಿದರೆ, ಅವಶ್ಯವಿದ್ದಲ್ಲಿ ಮರು ಹಂಚಿಕೆ ಮಾಡಲಾಗುವುದು ಎಂದರು.
ಅಗತ್ಯವಿದ್ದಲ್ಲಿ ಕೊಳವೆ ಬಾವಿ ಕೊರೆಯಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಎಇಇ ಸಿ.ಎಸ್. ನೆಗಳೂರ ಅವರಿಗೆ ಸೂಚಿಸಿದರು.

ತಾಪಂ ಇಒ ಬಿ.ಸುನೀಲಕುಮಾರ, ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಜಿಪಂ ಎಇಇ ದೇವರಾಜ್ ಇದ್ದರು.

ಗ್ರಾಮೀಣ ಪ್ರದೇಶದಲ್ಲಿನ ಜನತೆ ದಾಖಲೆಗಳಿಗಾಗಿ ಹಾಗೂ ಪಿಡಿಒಗಳ ಹುಡುಕಾಟಕ್ಕಾಗಿ ತಾಲೂಕು ಕೇಂದ್ರಕ್ಕೆ ಬರುವಂತಾಗಬಾರದು. ಪ್ರತಿದಿನ ಬೆಳಗ್ಗೆ ಮೂರು ಗಂಟೆ ಕಚೇರಿಯಲ್ಲಿದ್ದು, ಮನವಿದಾರರಿಗೆ ದಾಖಲೆಗಳನ್ನು ನೀಡಬೇಕು. ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕೆಲಸಗಳಿದ್ದಲ್ಲಿ ನಮ್ಮ ಕಚೇರಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಶ್ರೀನಿವಾಸ ಮಾನೆ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net