

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಥೆಗಾರ ತಾನು ಕಂಡ ಸಮಾಜವನ್ನು ಕಣ್ಮುಂದೆ ತರುವುದು ಮುಖ್ಯ, ಪರಂಪರೆಯ ಅರಿವು ಮತ್ತು ವರ್ತಮಾನಕ್ಕೆ ಸ್ಪಂದಿಸುವ ಕತೆಗಳನ್ನು ರಚಿಸಬೇಕು ಎಂದು ಹಿರಿಯ ಲೇಖಕ ಡಾ. ಬಾಳಾಸಾಹೇಬ ಲೋಕಾಪುರ ಹೇಳಿದರು.
ಅಕ್ಷರ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಹಾಗೂ ಕೆಎಂಸಿಆರ್ಐ ಸಂಯುಕ್ತಾಶ್ರಯದಲ್ಲಿ, ಕಿಮ್ಸ್ ಸಭಾಂಗಣದಲ್ಲಿ ’ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಥೆಗಾರ ಒಳಗಣ್ಣಿನಿಂದ ನೋಡಿದ್ದನ್ನು ಬರೆಯಬೇಕು ಎಂದರು.
ಕಥಾ ಸ್ಪರ್ಧೆ ವಿಜೇತ ಹಾವೇರಿಯ ಪದವಿ ವಿದ್ಯಾರ್ಥಿ ಮಣಿಕಂಠ ಗೊದಮನಿ ಈ ಬಹುಮಾನ ನನ್ನ ಮುಂದಿನ ಪಯಣಕ್ಕೆ ಸೂಕ್ತ ದಾರಿದೀಪ ಎಂದು ಸಂತಸ ಹಂಚಿಕೊ0ಡರು.
ಕಥಾ ತೀರ್ಪಗಾರ, ವಿಮರ್ಶಕ ಡಾ. ರಂಗನಾಥ ಕಂಟನಕುಂಟೆ ಮಾತನಾಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಣಿಕಂಠನನ್ನು ಕಾಡಿದ ಜಾತಿ ವ್ಯವಸ್ಥೆ, ದೌರ್ಜನ್ಯ, ಕ್ರೌರ್ಯದ ಕುರಿತು ಈ ನೇಣು ಕಥೆ ಆತ್ಯಂತಿಕವಾಗಿ ಧ್ವನಿಸುತ್ತಿದೆ, ಮಕ್ಕಳನ್ನೂ ಎಡಬಿಡದೆ ಕಾಡುವಂತೆ ಮಾಡಿದ ನಮ್ಮ ವ್ಯವಸ್ಥೆಯ ಕರಾಳತೆ ಕುರಿತು ನಾವು ಮೊದಲು ಚಿಂತಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕೆಎಂಸಿಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಮಾತನಾಡಿದರು. ಎಂ.ಬಿ. ಅಡ್ನೂರು ಅಧ್ಯಕ್ಷತೆ ವಹಿಸಿದ್ದರು. ವಿಜಯಾ ಅಗಸನಕಟ್ಟೆ ಹಾಗೂ ಹರ್ಷ ಅಗಸನಕಟ್ಟೆ ಉಪಸ್ಥಿತರಿದ್ದರು. ರಾಮು ಮೂಲಗಿ ಪ್ರಾರ್ಥಿಸಿದರು, ಸುನಂದಾ ಕಡಮೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಸಿದ್ದೇಶ್ವರ ಕಟಕೋಳ ಅತಿಥಿಗಳನ್ನು ಪರಿಚಯಿಸಿದರು. ನಿರ್ಮಲಾ ಶೆಟ್ಟರ್ ಪ್ರಶಸ್ತಿ ಪತ್ರ ವಾಚಿಸಿದರು. ಮಹಾಂತಪ್ಪ ನಂದೂರ ವಂದಿಸಿದರು. ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು.
ಸಿ ಎಂ ಮುನಿಸ್ವಾಮಿ, ಡಾ. ಬಸು ಬೇವಿನಗಿಡದ, ಪ್ರಕಾಶ ಕಡಮೆ, ಚೆನ್ನಪ್ಪ ಅಂಗಡಿ, ಚಿದಾನಂದ ಕಮ್ಮಾರ, ಗೋವಿಂದ ಹೆಗಡೆ, ಬಿ. ಎಸ್. ಸೊಪ್ಪಿನ, ವೆಂಕಟೇಶ ಮರೇಗುದ್ದಿ, ಸಂಜೀವ ದುಮಕನಾಳ, ಸೋಮು ರೆಡ್ಡಿ, ಸರೋಜಾ ಮೇಟಿ, ರಾಜು ದರ್ಗಾದವರ, ಮಲ್ಲಮ್ಮ ಚಲವಾದಿ, ವೀರಣ್ಣ ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.