ಮನಸ್ಸಿನ ಸ್ವ-ನಿಯಂತ್ರಣ ಇರಲಿ: ಕೆ.ರಾಮರಾಜನ್

30adarshkdga2
Published on

ಮಡಿಕೇರಿ: ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಸ್ವ ನಿಯಂತ್ರಣದೊಂದಿಗೆ ಕಠಿಣ ಪರಿಶ್ರಮದ ಮೂಲಕ ಗುರಿ ತಲುಪಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದರು.


ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವ ಜನಾಂಗ ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೇ, ವಿದ್ಯಾರ್ಥಿಗೆ ಭವಿಷ್ಯದ ಗುರಿ ಉದ್ದೇಶ ಸ್ಪಷ್ಟವಾಗಿದ್ದು, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಎದುರಿಸಬಹುದಾದ ಸಮಸ್ಯೆಗಳು ಹಾಗೂ ಅವುಗಳನ್ನು ಹೇಗೆ ಮೆಟ್ಟಿ ನಿಂತು ಮುಂದೆ ಬರಬಹುದು ಎಂಬುದನ್ನು ತನ್ನ ಸ್ವಂತ ಅನುಭವದ ಮೂಲಕ ತಿಳಿಸಿದರು.


ಪ್ರಶ್ನೋತ್ತರಗಳ ಮೂಲಕ ಸಂವಾದದಲ್ಲಿ ಪಾಲ್ಗೊಂಡು ಅನೇಕ ಉಪಯುಕ್ತ ಮಾಹಿತಿಗಳನ್ನು ವಿದ್ಯಾರ್ಥಿ ವೃಂಧಕ್ಕೆ ನೀಡಿದರು. ಸರಿಯಾದ ಉತ್ತರ ನೀಡಿದ ಮಕ್ಕಳಿಗೆ ಚಾಕಲೇಟ್ ನೀಡಿ ಅತ್ಯುತ್ಸಾಹದಿಂದ ಭಾಗಿಯಾಗಿ ಮನಗೆದ್ದರು.


ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ.ಕುಮಾರ್, ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಉಪನ್ಯಾಸಕಿ ಪ್ರಮೀಳ, ದೈಹಿಕ ಶಿಕ್ಷಣ ಶಿಕ್ಷಕ ಪಾಲಾಕ್ಷ, ವೇದಿಕೆಯಲ್ಲಿ ಸೋಮವಾರಪೇಟೆ ವೃತ್ತ ನೀರಿಕ್ಷಕ ಮಹೇಶ್, ಸುಂಟಿಕೊಪ್ಪ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಧರ್, ಸಂಸ್ಥೆಯ ಮುಖ್ಯ ಶಿಕ್ಷಕಿ ರೇವತಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net