

ಶಿರಸಿ: ರೈತರ ಸಮಸ್ಯೆಗೆ ಸ್ಪಂದಿಸಲು ವಿಮಾ ಕಂಪನಿಗೆ ದುಂಬಾಲು ಬೀಳುವ ಬದಲು ಕೊಳೆ ರೋಗದಿಂದ ಹಾನಿ ಅನುಭವಿಸಿದ ಪ್ರದೇಶಗಳ ಎಲ್ಲ ರೈತರಿಗೂ ಕೇಂದ್ರ ಸರ್ಕಾರ ಪರಿಹಾರ ನೀಡಲಿ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ದೀಪಕ ದೊಡ್ಡೂರು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರ ಪ್ರವಾಸವೆಲ್ಲ ಪ್ರಶಂಸನಾರ್ಹವಾಗಿದೆ. ಆದರೆ, ಅವರ ಕಾರ್ಯ ವೈಖರಿ ಸಮಾಧಾನ ತಂದಿಲ್ಲ. ವಿಮಾ ಕಂಪನಿಗಳ ಆಯ್ಕೆಯನ್ನು ಕೇಂದ್ರವೇ ನಿಗದಿಪಡಿಸುತ್ತಿದ್ದು, ಈ ಕಂಪನಿಗಳೇ ಸಚಿವರ ಮಾತು ಕೇಳುತ್ತಿಲ್ಲ ಎಂದರೆ ಹೇಗೆ? ಕೃಷಿ ಸಚಿವರೇ ಒಂದು ವಾರದ ಒಳಗೆ ಪರಿಹಾರ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರೂ ಕಾರ್ಯ ಸಾಧ್ಯವಾಗದಿರುವುದು ಆಶ್ಚರ್ಯ ಮೂಡುವಂತಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂಬಂತೆ ಮಾತನಾಡಿದ್ದಾರೆ. ಇದು ಒಂದು ರೀತಿಯಲ್ಲಿ ಅವರೇ ಕಥೆ ಬರೆದು, ನಟಿಸಿ, ನಿರ್ದೇಶಿಸಿದಂತಿದೆ. ಸಾಗರ ಮಾಲಾ ಯೋಜನೆಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಏಕೆ ವಿಳಂಬವಾಗುತ್ತಿದೆ? ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನು ಎಂಬುದನ್ನು ಅವರು ಹೇಳಲಿ. ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಪ್ರಸ್ತಾಪವಾಗಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಎಂದು ಟೀಕಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಕಾಂಗ್ರೆಸ್ ಪ್ರಮುಖರಾದ ಜ್ಯೋತಿಗೌಡ ಪಾಟೀಲ, ಗಣೇಶ ದಾವಣಗೆರೆ ಇತರರಿದ್ದರು.
ಕೋಟ್:
ಅಡಕೆ ಬೆಳೆಯುವ ಕ್ಷೇತ್ರದಲ್ಲಿ ಎಲೆಚುಕ್ಕಿ ರೋಗ ತೀವ್ರಗೊಂಡು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರದಲ್ಲಿ ಹಣ ಇದ್ದರೆ ಎಲೆಚುಕ್ಕಿಗೆ ಬಾಧಿತ ತೋಟಗಳ ಮಾಲೀಕರಿಗೆ ನಬಾರ್ಡ್ ಮೂಲಕ ವಿಶೇಷ ಪ್ಯಾಕೇಜ್ ಕೊಡಬಹುದಿತ್ತು.
-ದೀಪಕ ದೊಡ್ಡೂರು, ಕಾಂಗ್ರೆಸ್ ವಕ್ತಾರ.