ಚರಕಾಚಾರ್ಯರ ಚಿಕಿತ್ಸೆಯ ಸಂಶೋಧನೆ ನಡೆಯಲಿ

h7-ayurveda
Published on

ಹುಬ್ಬಳ್ಳಿ: ಚರಕ ಮಹರ್ಷಿ ನೀಡಿದ ಚಿಕಿತ್ಸೆ ಆಧರಿಸಿ ಸಂಶೋಧನೆ ನಡೆಯಬೇಕು. ಇದರಿಂದ ಇನ್ನಷ್ಟು ಕುತೂಹಲಕಾರಿ ಶಸ್ತ್ರಚಿಕಿತ್ಸೆಯ ಅಧ್ಯಯನಾಂಶಗಳು ಹೊರಬೀಳಲಿವೆ ಎಂದು ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಚರಕ ಮಹರ್ಷಿ ಪ್ರಪಂಚಕ್ಕೆ ಸೂತ್ರಗಳನ್ನು ನೀಡಿದ್ದರು ಎಂದು ಸ್ಮರಿಸಿದರು.

ಆಯುಷ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಎನ್. ಆಂಜನೇಯ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಚರಕಾಚಾರ್ಯರು ಆಯುರ್ವೇದದಲ್ಲಿ ನೀಡಿದ ಚಿಕಿತ್ಸೆಯ ಕೊಡುಗೆ ಅಪಾರ ಎಂದರು.

ಉಪನ್ಯಾಸಕ ಡಾ. ಪ್ರದೀಪ ಅಗ್ನಿಹೋತ್ರಿ ಅವರು ಚರಕ ಸಂಹಿತೆಯಲ್ಲಿ ಬರುವ ರಸ ಔಷಧ ಬಗ್ಗೆ ವಿಶ್ಲೇಶಾತ್ಮಕವಾಗಿ ವಿವರಿಸಿದರು.

ಶಿವಮೊಗ್ಗದ ಆಯುರ್ವೇದ ತಜ್ಞ ಡಾ. ಗುರುರಾಜ ಎಂ.ಬಿ., ಚರ್ಮರೋಗ ಮತ್ತು ಯಕೃತ್ ರೋಗಗಳಿಗೆ ವಿಶೇಷ ಆಯುರ್ವೇದ ಉಪಚಾರಗಳ ಬಗ್ಗೆ ಉಪನ್ಯಾಸ ನೀಡಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ರಾಘವ ಕೆ.ಎಲ್. ಚರಕ ಶರೀರದಲ್ಲಿನ ವ್ಯಾಕರಣ ಅಂಶ, ಕೇರಳದ ವೈದ್ಯರತ್ನಂ ಔಷಧಶಾಲೆಯ ಡಾ. ನವನೀತ ಕೃಷ್ಣನ್ ವೈದ್ಯರತ್ನಂ ಔಷಧಶಾಲೆಯ ಔಷಧ ಬಗ್ಗೆ ತಿಳಿಸಿಕೊಟ್ಟರು.

ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಅಧ್ಯಕ್ಷತೆ ವಹಿಸಿದ್ದರು. ವೇದವ್ಯಾಸ ಸಂಸ್ಕೃತ ಕ್ಲಬ್ ಅನ್ನು ಡಾ. ಸಂದೀಪ ದೇಸಾಯಿ ಉದ್ಘಾಟಿಸಿದರು.

ಆಯುರ್ವೇದ ಮಹಾವಿದ್ಯಾಲಯದ ಡೀನ್ ಡಾ.ಜೆ.ಆರ್. ಜೋಶಿ, ಸೇವಾ ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ಖಜಾಂಚಿ ಶಂಕರರಾವ್ ಮಾಮಲೇದೇಶಪಾಂಡೆ, ಡಾ. ಸೌರಭ ಕೊಕಟನೂರ, ಡಾ. ವಿನಯಕುಮಾರ ಹಿರೇಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net