

ಹುಬ್ಬಳ್ಳಿ: ಶಿಸ್ತಿನಲ್ಲಿ ನಾವು ಸ್ವಲ್ಪ ಹಿಂದೆ ಬೀಳುತ್ತಿದ್ದೇವೆ. ಹಲವರಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇಲ್ಲದೇ ಕೆಲಸ ಮಾಡುವುದು ಅಸಾಧ್ಯ. ಶಿಸ್ತಿನಿಂದ ಇದ್ದರೆ ಎಲ್ಲ ಕೆಲಸಗಳು ಪರಿಣಾಮಕಾರಿಯಾಗುತ್ತವೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಆರ್. ಬಡಿಗೇರ ಹೇಳಿದರು.
ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುವುದೇ ಕಷ್ಟ. ಸಿಕ್ಕವರೇ ಅದೃಷ್ಟವಂತರು. ಠಾಣೆಗೆ ದುರ್ಬಲರು, ಬಡವರು, ಸಂಕಷ್ಟಕ್ಕೆ ಸಿಲುಕಿದವರು ಬರುತ್ತಾರೆ. ತಾಳ್ಮೆಯಿಂದ ಅವರ ಕಷ್ಟ ಕೇಳಿದರೆ ಅರ್ಧ ಸಮಸ್ಯೆ ಪರಿಹಾರ ಆಗುತ್ತದೆ. ಹಾಗಾಗಿ, ಎಂದಿಗೂ ಯಾರನ್ನೂ ನಿರ್ಲಕ್ಷಿ್ಯಬಾರದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಆಯುಕ್ತ ಲಾಭೂರಾಮ, ಕರ್ನಾಟಕ ಏಕೀಕರಣದ ನಂತರ 1965 ಏಪ್ರಿಲ್ 2ರಂದು ಕರ್ನಾಟಕ ಪೊಲೀಸ್ ಕಾಯ್ದೆ ಮೂಲಕ ಇಲಾಖೆಯನ್ನು ಪುನರ್ ರಚಿಸಲಾಯಿತು. ಇದರ ನೆನಪಿಗಾಗಿ ಧ್ವಜ ದಿನಾಚರಣೆ ಆಚರಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟದಿಂದ ಬಂದ ಹಣದಲ್ಲಿ ಶೇ.50ರಷ್ಟು ಹಣವನ್ನು ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ, ಶೇ.25ರಷ್ಟನ್ನು ಕಾರ್ಯನಿರತ ಪೊಲೀಸರ ನಿಧಿಗೆ, ಉಳಿದ ಶೇ.25ರಷ್ಟನ್ನು ಕೇಂದ್ರ ಪೊಲೀಸ್ ನಿಧಿಗೆ ನೀಡಲಾಗುತ್ತದೆ ಎಂದರು.
ಕಮಿಷನರೇಟ್ನ ಇನ್ಸ್ಪೆಕ್ಟರ್ ಶಿವಪ್ಪ ಕಮತಗಿ ಹಾಗೂ ಹೆಡ್ ಕಾನ್ಸ್ಟೇಬಲ್ ಕುಶಾಲ ಪಂಡರಿ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿದ್ದು ಸಂತಸ ತಂದಿದೆ ಎಂದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಆಯುಕ್ತರು 2021ರ ಪೊಲೀಸ್ ಧ್ವಜ ಬಿಡುಗಡೆ ಮಾಡಿದರು. ಸ್ಥಳದಲ್ಲಿ ಸಾಂಕೇತಿಕವಾಗಿ ಧ್ವಜ ಮಾರಾಟ ಮಾಡಿ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು. ಸೇವಾ ನಿವೃತ್ತಿ ಹೊಂದಿದ ಸಹಾಯಕ ಆರಕ್ಷಕ ನಾಗರಾಜ ಪಾಟೀಲ, ಪೊಲೀಸ್ ದಲಾಯತ್ ಶಕುಂತಲ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ನಿವೃತ್ತ ಪೊಲೀಸ್ ಅಧೀಕ್ಷಕ ಎಸ್.ಎಂ. ಸಂದಿಗವಾಡ, ರವಿ ನಾಯಕ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉಪ ಪೊಲೀಸ್ ಆಯುಕ್ತರಾದ ಕೆ. ರಾಮರಾಜನ್, ಆರ್.ಬಿ. ಬಸರಗಿ, ಸಿಎಆರ್ ಡಿಸಿಪಿ ಎಸ್.ವಿ. ಯಾದವ, ಎಸಿಪಿಗಳಾದ ವಿನೋದ ಮುಕ್ತೇದಾರ, ಜಿ. ಅನುಷಾ, ನಿವೃತ್ತ ಅಧಿಕಾರಿಗಳು, ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು. ಜಗದೀಶ ಹಂಚಿನಾಳ ನಿರೂಪಿಸಿದರು.
ಅತಿ ಸೂಕ್ಷ್ಮ ಪ್ರದೇಶವಾಗಿತ್ತು ಹುಬ್ಬಳ್ಳಿ
ನಾನು ಹು-ಧಾದಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. 1992ರಿಂದ 2000ವರೆಗೆ ಅತಿಸೂಕ್ಷ್ಮ ಪ್ರದೇಶವಾಗಿತ್ತು. ಕೋಮು ಘರ್ಷಣೆ, ಗಲಾಟೆಗಳಿಂದ ಕೂಡಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕಠಿಣವಾಗಿತ್ತು. ಆ ಸಂದರ್ಭದಲ್ಲಿ ನಮ್ಮೆಲ್ಲ ಸಿಬ್ಬಂದಿ, ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡಿದ್ದರಿಂದ ಹುಬ್ಬಳ್ಳಿ ಈಗ ಶಾಂತವಾಗಿದೆ ಎಂದು ಎ.ಆರ್. ಬಡಿಗೇರ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇಲಾಖೆಯಲ್ಲಿನ ಸೇವೆ ಹೆಮ್ಮೆಯ ಸಂಕೇತ
ಧಾರವಾಡ: ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿ ಕರ್ತವ್ಯ ನಿರ್ವಹಿಸುವುದು ನಮ್ಮ ಪೂರ್ವ ಜನ್ಮದ ಪುಣ್ಯ. ಪೊಲೀಸ್ ಸೇವೆ ಧೈರ್ಯ, ತ್ಯಾಗ, ಬಲಿದಾನ ಮತ್ತು ಹೆಮ್ಮೆಯ ಸಂಕೇತ ಎಂದು ನಿವೃತ್ತ ಡಿವೈಎಸ್ಪಿ ನಾಗರಾಜ ಅಂಬಲಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನ ಮತ್ತು ನಿವೃತ್ತರ ಸೇವಾ ಸುಸ್ಮರಣೆ, ಗೌರವ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಸ್ತು, ಸೇವೆಗೆ ಹೆಸರಾದ ಪೊಲೀಸ್ ಇಲಾಖೆ ದೇಶದ ಆಂತರಿಕ ಭದ್ರತೆ, ಜನರ ನೆಮ್ಮದಿಯ ಬದುಕಿಗೆ ಭರವಸೆ ಮೂಡಿಸಿ ವಿಶ್ವಾಸ ತುಂಬುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಕಳೆದ ವರ್ಷ ಧ್ವಜ ಮಾರಾಟದಿಂದ ಪೊಲೀಸ್ ಕಲ್ಯಾಣ ನಿಧಿಗೆ 10,76,950 ರೂ. ದೇಣಿಗೆ ಸಂಗ್ರಹವಾಗಿದೆ. ಇದರಲ್ಲಿ 5,38,475 ರೂಪಾಯಿಗಳನ್ನು ಘಟಕದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ, ಘಟಕದ ಸೇವಾನಿರತ ಪೊಲೀಸ್ ಕಲ್ಯಾಣ ನಿಧಿಗೆ 2,69,237 ರೂಪಾಯಿ ಮತ್ತು ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ 2,69, 238 ರೂಪಾಯಿ ಜಮೆ ಮಾಡಲಾಗಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ವಿ. ಉಪ್ಪಿನ, ಎಂ.ಎ. ಶೇಖ್, ಎಸ್.ಎಂ. ಚವ್ಹಾಣ, ಎಂ.ಎಸ್. ಅಚ್ಚಮ್ಮನವರ, ಬಿ.ಟಿ. ಶಿಗ್ಲಿ, ಆರ್.ಸಿ. ಗಂಡಲಾಟಿ, ಸಿ.ಎಂ. ಯಾದವಾಡ, ಸಿ.ಕೆ. ಯರಗಂಬಳಿಮಠ, ಕೆ.ವಿ. ಶಿದ್ದನಗೌಡರ, ಎಂ.ಆರ್. ಕಾಳೆ, ಎಂ.ಸಿ. ಕಂಗೂರಿ, ವೈ.ಎಸ್. ಬಡಿಗೇರ, ಎಂ.ಎಚ್. ಜಮಾಲಖಾನವರ, ಎಚ್.ಎನ್. ಬಡ್ನಿ, ಆರ್.ಎನ್. ಕಲಘಟಗಿ, ಮಹಿಳಾ ಪಿಎಸ್ಐ ಬಿ.ಎನ್. ಕುಲಕರ್ಣಿ, ಎಂ.ಬಿ. ಹೆಬ್ಬಾಳ, ಎಂ.ಎಂ. ಹಳಕಟ್ಟಿ, ಬಿ.ಎ. ಹಜೇರಿ ಮತ್ತು ಡಿ.ವೈ. ಜಗತಾಪ ಅವರನ್ನು ಸನ್ಮಾನಿಸಲಾಯಿತು. ಡಿವೈಎಸ್ಪಿ ಎಂ.ಬಿ. ಸಂಕದ, ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಇತರರು ಇದ್ದರು. ಡಿಎಆರ್ ವಿಭಾಗದ ಆರ್ಪಿಐ ಜಿ.ಸಿ. ಡೂಗನವರ ನೇತೃತ್ವದಲ್ಲಿ ವಿವಿಧ ಪ್ಲಟೂನ್ ತಂಡಗಳು ಪರೇಡ್ ಮೂಲಕ ಗೌರವ ಸಲ್ಲಿಸಿದರು. ಡಾ.ವೈ.ಪಿ. ಕಲ್ಲನಗೌಡರ ನಿರೂಪಿಸಿದರು. ಡಿಎಆರ್ ವಿಭಾಗದ ಡಿವೈಎಸ್ಪಿ ಜಿ.ಸಿ. ಶಿವಾನಂದ ವಂದಿಸಿದರು.