ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಿರಲಿ

SVR SHANTI SABHE
Published on

ಸವಣೂರ: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದá-- ಮುಸ್ಲಿಂ ಸಮಾಜದವರು ಶ್ರದ್ಧಾ ಭಕ್ತಿಯಿಂದ ಆಚರಿಸಿ ಭಾವೈಕ್ಯ ಮೆರೆಯಬೇಕು ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಕಂದಾಯ, ಪೊಲೀಸ್, ವಿವಿಧ ಇಲಾಖೆಗಳು ಹಾಗೂ ಇಲಾಖೆ, ಪುರಸಭೆ ಸಹಯೋಗದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹಿಂದು-ಮುಸ್ಲಿಂ ಸಮಾಜದವರು ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಬೇಕು. ಗಣೇಶ ಚತುರ್ಥಿ ಹಬ್ಬದ ಆಚರಣೆ ಸಮಿತಿ ಸದಸ್ಯರು ಪ್ರತಿವರ್ಷ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಬದಲು ಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕು. ಹೊಸ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಇರುವುದಿಲ್ಲ. ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು.

ಪಟಾಕಿ ಮಾರಾಟಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ವ್ಯಾಪಾರಸ್ಥರು ಅದೇ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡಬೇಕು. ಈದ್ ಮಿಲಾದ್ ಹಬ್ಬದಂದು ಸಂತೆ ಬಂದರೆ ಮೆರವಣಿಗೆಗೆ ತೊಂದರೆ ಉಂಟಾಗುವಂತಿದ್ದರೆ ವಾರದ ಸಂತೆ ಮುಂದೂಡಲು ತಾಲೂಕಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಭೆಯ ನೇತೃತ್ವವಹಿಸಿದ್ದ ಸಿಪಿಐ ದಯಾನಂದ ಎಸ್. ಮಾತನಾಡಿ, ಗಣೇಶೋತ್ಸವ ಆಚರಣೆ ಸಾರ್ವಜನಿಕರಿಗೆ ತೊಂದರೆಯುಂಟಾಗದ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ವಿದ್ಯುತ್ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಿ, ಹೆಸ್ಕಾಂ ಇಲಾಖೆಯಿಂದ ಪರಿಶೀಲಿಸಿ ಪರವಾನಗಿ ಪಡೆಯಬೇಕು. ಗಣೇಶನ ಪ್ರತಿಷ್ಠಾಪನೆ ಸ್ಥಳದಲ್ಲಿ ಭಕ್ತಿ ಗೀತೆಗಳನ್ನು ಹಾಕಲು ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶ ಇದ್ದು, ಪಕ್ಕದವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಂದೋಬಸ್ತ್ ದೃಷ್ಟಿಯಿಂದ ಗಣೇಶ ವಿಸರ್ಜನೆ ದಿನವನ್ನು ಪರವಾನಗಿ ಪಡೆಯುವ ದಿನದಂದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಈದ್​ವಿುಲಾದ್ ಹಬ್ಬದಂದು ಗಣೇಶೋತ್ಸವ ಸಮಿತಿಯವರು ಹೊಂದಾಣಿಕೆ ಮಾಡಿಕೊಂಡು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿ ಗಣೇಶ ಮೂರ್ತಿ ವಿಸರ್ಜಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಅಗ್ನಿಶಾಮಕ ಠಾಣಾಧಿಕಾರಿ ಪರಶುರಾಮ ಲಮಾಣಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಆನಂದ ಗುಡಿಮನಿ, ಹೆಸ್ಕಾಂ ಸಿಬ್ಬಂದಿ ನಿಂಗಪ್ಪ ದೊಡ್ಡಮನಿ, ಅರಣ್ಯ ಇಲಾಖೆ ಅಧಿಕಾರಿ ವೀರಭದ್ರಪ್ಪ ಕಾಡಶೆಟ್ಟಿ, ಗಣೇಶೋತ್ಸವ ಆಚರಣೆ ಸಮಿತಿ ಸದಸ್ಯರು, ಮುಸ್ಲಿಂ ಸಮಾಜದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net