ರಾಜಕಾರಣದಲ್ಲಿ ಸಿದ್ಧಾಂತ ಇರುವವರು ಹೆಚ್ಚಲಿ

17 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜಕಾರಣ ಎಂದರೆ ಅಧಿಕಾರ ದಾಹ, ಹಣಬಲ ಹೊಂದಿದ ವ್ಯಕ್ತಿಗಳ ಸಂಘ ಎಂದಾಗಿರುವ ಸಂದರ್ಭದಲ್ಲಿ ಸಮಗ್ರ ಅಧ್ಯಯನದ ಜತೆಗೆ ರಾಜಕಾರಣಕ್ಕೆ ಮೇಧಾವಿ, ತತ್ವ ಸಿದ್ಧಾಂತ ಹೊಂದಿದ ಜನರು ಹೆಚ್ಚಾಗಿ ಬರಬೇಕು ಎಂದು ಸರ್ಕಾರಿ ವಿಶೇಷ ಅಭಿಯೋಜಕ (ಸಿಬಿಐ) ಎಸ್.ಎಸ್. ಶಿವಳ್ಳಿ ಖೇದ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪ ವತಿಯಿಂದ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ನಾಗರಿಕ ಕರ್ತವ್ಯ, ರಾಜಕೀಯ ಅಧಿಕಾರ ಹಾಗೂ ನೈತಿಕ ಮೌಲ್ಯಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿದೆ. ರಾಜಕಾರಣಿಗಳಿಗೆ ಅಧ್ಯಾತ್ಮದ ಒಲುವು ಇದ್ದರೆ ಮಾತ್ರ ಸಮೃದ್ದ ಸಮಾಜ ಕಟ್ಟಲು ಸಾಧ್ಯ. ಮನಸ್ಸಿಗೆ ತೋಚಿದ್ದನ್ನು ಮಾತನಾಡಿದರೆ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರಾಜಕೀಯಕ್ಕೆ ಬರುವವರಿಗೆ ತಮ್ಮದೇ ಆದ ಕಾನೂನು ನೀತಿ, ನಿಯಮ, ತತ್ವ ಸಿದ್ಧಾಂತ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ಸಜ್ಜನರು ಯಾವುದೇ ಪಕ್ಷಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಗ್ಯಾರಂಟಿಗಳ ಯೋಜನೆಯಲ್ಲಿ ಸರ್ಕಾರದ ಧೋರಣೆ ಸಮರ್ಪಕವಲ್ಲ. ಸರ್ಕಾರದ ಖರ್ಚಿನಲ್ಲಿಯೇ ವಿಲಾಸಿ ಜೀವನ ನಡೆಸಬೇಕು ಎಂಬ ಧೋರಣೆ ರಾಜಕಾರಣಿಗಳ ನಡೆಯಾಗಬಾರದು. ಜನರು ಈ ಕುರಿತು ಜಾಗೃತಿ ವಹಿಸಬೇಕು ಎಂದರು.
ಮಹಾನಂದಾ ಮುದೇನಗುಡಿ ಮಾತನಾಡಿ, ಸಂವಿಧಾನ ಹಕ್ಕುಗಳನ್ನು ಕೇಳುವ ನಾಗರಿಕರು ತಮ್ಮ ಕರ್ತವ್ಯಗಳನ್ನು ಸಹ ಚಾಚು ತಪ್ಪದೆ ಪಾಲಿಸಬೇಕು ಎಂದರು. ಚಂದ್ರಕಾಂತ ಬೆಲ್ಲದ ಮಾತನಾಡಿದರು. ಸುರೇಶ ಹುಡೇದಗಡ್ಡಿ ಅಧ್ಯಕ್ಷತೆ ವಹಿಸಿದ್ದರು.
ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ನಾಗರಾಜ ಕೊಲ್ಲೂರಿ, ಮಲ್ಲಿಕಾರ್ಜುನ ಮನಗೊಂಡ, ಪ್ರಭಾಕರ ಹಿರೇಮಠ, ಶಂಕರಲಿಂಗ ಶಿವಳ್ಳಿ, ಎಂ.ಎಂ. ಚಿಕ್ಕಮಠ, ಮಹಾಂತೇಶ ನರೇಗಲ್, ಪ್ರಮೀಳಾ ಜಕ್ಕಣ್ಣವರ, ಸುರೇಶ ನಾಯಕ, ಸಿ.ಸಿ. ಮಹಾಜನಶೆಟ್ಟರ, ಗೀತಾ ಕೊಣ್ಣೂರ, ಇತರರು ಇದ್ದರು.
ಎನ್.ಆರ್. ಬಾಳಿಕಾಯಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರು ಹಿರೇಮಠ ನಿರೂಪಿಸಿದರು. ಸರಸ್ವತಿ ಪೂಜಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net