ನಾಡು, ನುಡಿಯ ಮೇಲೆ ಅಭಿಮಾನ ಇರಲಿ

28-NPK-1
Published on

ನಾಪೋಕ್ಲು : ನಾಡು, ನುಡಿ, ಪರಂಪರೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.

69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಹೋಬಳಿ ಘಟಕ, ಸಹಕಾರ ಮಹಿಳಾ ಸಮಾಜ, ಪಿಪಿ ಫೌಂಡೇಷನ್‌ನಿಂದ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು, ಕನ್ನಡ ನಾಡು, ನುಡಿಯ ವಿಚಾರ ತಿಳಿಯಬೇಕು. ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು. ವಿದ್ಯಾರ್ಥಿಗಳಲ್ಲಿ ಅಡಗಿದ ಪ್ರತಿಭೆ ಅನಾವರಣಗೊಳ್ಳಲು ಇದೊಂದು ಉತ್ತಮ ಅವಕಾಶ. ಪಾಠದ ಜತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಫಿ ಬೆಳೆಗಾರ ಕೇಟೊಳಿರ ಕುಟ್ಟಪ್ಪ ಮಾತನಾಡಿ, ಕನ್ನಡದ ವಿಚಾರಗಳಲ್ಲಿ ಒಗ್ಗಟ್ಟು ಪ್ರವೇಶಿಸಬೇಕು. ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಎಲ್ಲರೂ ಒಗ್ಗೂಡಬೇಕು. ಕನ್ನಡದಲ್ಲಿ ವ್ಯವಹಾರ ಮಾಡುವುದರಿಂದ ಇನ್ನಷ್ಟು ಭಾಷೆ ಬೆಳೆಯಲು ಸಹಕಾರಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಕನ್ನಡದ ಕಾರ್ಯಕ್ರಮ ನಡೆದಾಗ ಸದಸ್ಯರೆಲ್ಲರೂ ಪಾಲ್ಗೊಳ್ಳಬೇಕು. ಹೆಚ್ಚು ಹೆಚ್ಚು ಸದಸ್ಯರು ಸಾಹಿತ್ಯ ಪರಿಷತ್ತಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಜಾನಪದ ಗೀತೆ, ಭಾವಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿತು. ವಿಜೇತರಾದವರಿಗೆ ಬಹುಮಾನ ಹಾಗೂ ಅರ್ಹತಾ ಪತ್ರ ವಿತರಿಸಲಾಯಿತು.

ಬೆಳಗ್ಗೆ ಕೆಪಿಎಸ್ ಶಾಲೆಯ ಆವರಣದಲ್ಲಿ ಕಾಫಿ ಬೆಳೆಗಾರ, ದಾನಿಗಳಾದ ಕೇಟೋಳಿರ ಕುಟ್ಟಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಪಿಎಸ್ ಪ್ರೌಢಶಾಲೆಯಿಂದ ನಾಪೋಕ್ಲು ಪೆಟ್ರೋಲ್ ಬಂಕ್ ವರೆಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಕನ್ನಡ ಧ್ವಜ, ಬ್ಯಾಂಡ್ ವಾದ್ಯ ಗಳೊಂದಿಗೆ ವರ್ಣ ರಂಜಿತ ಮೆರವಣಿಗೆ ಜರುಗಿತು.

ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ನೆರವಂಡ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ವನಜಾಕ್ಷಿ, ಸರ್ಕಾರಿ ಸಹಕಾರಿ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ನಾಪೋಕ್ಲು, ಕೆಪಿಎಸ್ ಪ್ರೌಢಶಾಲಾ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ , ಕಾಫಿ ಬೆಳೆಗಾರ, ಪಿಪಿ ಫೌಂಡೇಷನ್ ಅಧ್ಯಕ್ಷ ಪಿ.ಪಿ.ಅಹಮದ್, ಅರಫತ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಬಾಲೆಯಡ ದಿವ್ಯಾ ಮಂದಪ್ಪ, ಗೌರವ ಕಾರ್ಯದರ್ಶಿ ಉಮಾಪ್ರಭು, ಗೌರವ ಕೋಶಾಧಿಕಾರಿ ಎಂ.ಎ.ಮನ್ಸೂರ್ ಆಲಿ, ಸಂಘಟನಾ ಕಾರ್ಯದರ್ಶಿ ಸಿ. ಎಚ್.ಅಹಮದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ, ಯಶೋದಾ ಕಟ್ಟಿ, ಅರುಣ್, ರಾಜ ದೇವಯ್ಯ, ಪ್ರಭು, ಬೊಳ್ಳಮ್ಮ ನಾಣಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net