

ಹುಬ್ಬಳ್ಳಿ: ಪ್ರಸಕ್ತ ವರ್ಷ ಗಣೇಶೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು. ಸಂಪ್ರದಾಯ, ಉತ್ಸವದ ಜತೆಗೆ ಮಾನವೀಯ ಮೌಲ್ಯ ಮಿಡಿಯುವ ಕಾರ್ಯವಾದಾಗ ಮಾತ್ರ ಗಣೇಶ ಹಬ್ಬಕ್ಕೆ ವಿಶಿಷ್ಟ ಮೆರಗು ಬರುತ್ತದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಲಹೆ ನೀಡಿದರು.
ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗದಿಂದ ಮಂಗಳವಾರ ಆಯುಕ್ತರ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗಣೇಶೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಹಾ ಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಅವರು ಮಾತನಾಡಿ, ಸಂಚಾರ ವ್ಯವಸ್ಥೆ, ಚಹಾ, ಡಬ್ಬಿ ಅಂಗಡಿಗಳಿಗೆ ಅವಕಾಶ, ಪಾರ್ಕಿಂಗ್ ವ್ಯವಸ್ಥೆ, ಪೆಂಡಾಲ್ಗಳಿಗೆ ಜನಸಾಂದ್ರತೆ ನಿಯಂತ್ರಿಸಲು ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಒದಗಿಸಬೇಕು. ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಮಹಾಮಂಡಳ ಸಿದ್ಧಪಡಿಸಿದ ಗಣೇಶೋತ್ಸವದ ನೀಲಿನಕ್ಷೆಯನ್ನು ಆಯುಕ್ತರು ನೋಡಿ ಸಂತೋಷ ವ್ಯಕ್ತಪಡಿಸಿದರು.
ಪ್ರಮುಖರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಅನಿಲ ಬೇವಿನಕಟ್ಟಿ, ಸಂತೋಷ ಶೆಟ್ಟಿ, ಗಾಯತ್ರಿ ನೆಲ್ಲಿಕೊಪ್ಪ, ಸಾಧನಾ ಪೂಜಾರ, ರೂಪಾ ಅಂಗಡಿ, ಸಂತೋಷ ವೆರ್ಣೇಕರ, ಅನಿಲ ಕವಿಶೆಟ್ಟಿ, ಡಾ. ಚಿದಾನಂದ ತೆಗ್ಗಿಹಳ್ಳಿ, ಸಿ.ಜಿ. ಧಾರವಾಡ ಶೆಟ್ರು, ರೋಹನ ಗೊಂದಕರ, ಪ್ರಮೋದ ಬದ್ಧಿ ಇತರರು ಇದ್ದರು.