

ಮೈಸೂರು: ಜನರಿಗೆ ಗುರಿ ತೊರಿಸುವ ಕೆಲಸ ಮಾಡದೆ ಗುರಿ ಮುಟ್ಟುವ ಏಣಿಯನ್ನು ಒದಗಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕಳಸ್ತವಾಡಿ ಬ್ರಹ್ಮಾಪುರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌ನ ಸಂಕಲ್ಪ ಸೌಧದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 1,10,001ನೇ ಸ್ವ ಸಹಾಯ ಸಂಘ ಉದ್ಘಾಟನೆ ಹಾಗೂ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ಆಲಸ್ಯ ತೊರಿಸಿದರೆ ಜನರನ್ನು ಸೌಲಭ್ಯದಿಂದ ವಂಚಿತರಾಗಿಸುತ್ತೇವೆ. ಸಿಎಸ್‌ಸಿ ಕಾರ್ಯಕ್ರಮಗಳನ್ನು ಜನರಿಗೆ ಒದಗಿಸುವ ಕೆಲಸವನ್ನು ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತನು ದುಡಿಮೆಯಲ್ಲಿ ಶ್ರದ್ಧೆ, ಕರ್ತವ್ಯದಲ್ಲಿ ನಂಬಿಕೆಯಿಂದ ಆತ್ಮವಂಚನೆ ಇಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದರು.
ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 1.10 ಲಕ್ಷ ಸ್ವಸಹಾಯ ಸಂಘಗಳು, 11.06 ಲಕ್ಷ ಸದಸ್ಯರಿದ್ದಾರೆ. ಸದಸ್ಯರಿಗೆ ಸೌಕರ್ಯ, ಕೃಷಿ ಕೃಷಿಯೇತರ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕ ಪ್ರಗತಿನಿಧಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪ್ರಸ್ತುತ 3 ಸಾವಿರ ಕೋಟಿ ರೂ.ಹೊರ ಬಾಕಿ ಚಾಲ್ತಿ ಸಾಲವಿದ್ದು, ಸಂಘಗಳಿಂದ ಶೇ.100 ರಷ್ಟು ಮರುಪಾವತಿಯಾಗುತ್ತಿದೆ. ಸಂಘದಿಂದ ಸಾಲ ಸೌಲಭ್ಯ ಪಡೆದ ಸದಸ್ಯರಿಗೆ ಆಪತ್ಕಾಲದಲ್ಲಿ ಸಹಕಾರಿಯಾಗುವಂತೆ ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದಡಿ ವಿಮಾ ಕಂಪನಿಗಳ ಮೂಲಕ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಮ್ಮೂರು ನಮ್ಮಕೆರೆ, ರುದ್ರಭೂಮಿ ಅಭಿವೃದ್ಧಿ, ಶುದ್ಧಗಂಗಾ ಕುಡಿಯುವ ನೀರಿನ ಘಟಕ, ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ, ನಿರ್ಗತಿಕರಿಗೆ ಮಾಸಾಶನ, ಜನಮಂಗಲ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ, ಮಹಿಳಾ ಸಬಲೀಕರಣ ಜ್ಞಾನವಿಕಾಸ ಕಾರ್ಯಕ್ರಮ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಜನಜಾಗೃತಿ ಕಾರ್ಯಕ್ರಮ, ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗಾಗಿ ಧರ್ಮೋತ್ಥಾನ ಟ್ರಸ್ಟ್, ಭಜನಾ ಪರಿಷತ್, ಭಜನಾ ಕಮ್ಮಟ, ರೈತ ಸೇವಾ ಕೇಂದ್ರ, ಹಸಿರು ಇಂಧನ ಕಾರ್ಯಕ್ರಮ, ಶೀಷ್ಯ ವೇತನ ಹಾಗೂ ಸಿ.ಎಸ್.ಸಿ. ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಗೆ ಒದಗಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿ ಎಂದು ನುಡಿದರು.
ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ, ವಿಚಕ್ಷಣಾ ಪ್ರಬಂಧಕಾರ ಬಿ.ಸೋಮಪ್ಪ ಪೂಜಾರಿ, ಪ್ರಾದೇಶಿಕ ವ್ಯಾಪ್ತಿಯ ಎಲ್ಲ ಯೋಜನಾಧಿಕಾರಿಗಳು, ಪ್ರಬಂಧಕರು, ಮೇಲ್ವಿಚಾರಕರು ಇದ್ದರು.