

ಶಿವಮೊಗ್ಗ:ನಗರದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಖೇಲೋ ಇಂಡಿಯಾ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮೀಸಲಿರಿಸಿದ್ದ 25 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಹೋಗಿದೆ. ಸೂಕ್ತ ಸಮಯದಲ್ಲಿ ಸ್ಥಳ ಗುರುತಿಸಲು ಸಾಧ್ಯವಾಗದೆ ಇದ್ದದ್ದು ಇದಕ್ಕೆ ಕಾರಣ. ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವ ಬದಲು ಎಲ್ಲರೂ ಸಹಕಾರ ನೀಡಬೇಕು ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಸೈನ್ಸ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 20 ಕೋಟಿ ರೂ. ಮಂಜೂರಾಗಿದೆ. ಈಗ ಅಲ್ಲಿ ಸೆಂಟರ್ ನಿರ್ಮಾಣಕ್ಕೆ ವಿರೋಧ ಕೇಳಿ ಬರುತ್ತಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಪ್ರಮುಖರೊಂದಿಗೆ ನಾನು ಚರ್ಚಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿ ಸೈನ್ಸ್ ಸೆಂಟರ್ ನಿರ್ಮಾಣ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ವಿಶಾಖಪಟ್ಟಣದ ರೋಗಗ್ರಸ್ಥ ಕೈಗಾರಿಕೆ ಪುನಶ್ಚೇತನಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಭದ್ರಾವತಿ ವಿಐಎಸ್‌ಎಲ್ ಕೂಡಾ ಅಭಿವೃದ್ಧಿ ಹೊಂದಲಿದೆ ಎಂದು ಬಿವೈಆರ್ ವಿಶ್ವಾಸ ವ್ಯಕ್ತಪಡಿಸಿದರು.