ಸಂಸದ ಪ್ರತಾಪ್ ಸಿಂಹ, ಆರೋಪಿ ಮನೋರಂಜನ್ ನಡುವಿನ ಸಂಪರ್ಕದ ಕುರಿತು ತನಿಖೆ ಆಗಲಿ

M-Lakshmana
Published on

ಮೈಸೂರು: ಸಂಸತ್‌ಗೆ ನುಗ್ಗಿರುವ ಮೈಸೂರಿನ ಮನೋರಂಜನ್, ಸಂಸದ ಪ್ರತಾಪ್ ಸಿಂಹ ಅವರ ಐಟಿ ಸೆಲ್‌ನಲ್ಲಿದ್ದರು. ಇದನ್ನು ಅವರು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.


ಪ್ರತಾಪ್ ಸಿಂಹ ಅವರಿಗೆ 10 ಪ್ರಶ್ನೆ ಕೇಳುತ್ತೇನೆ. ನಿಮಗೂ ಮನೋರಂಜನ್ ತಂದೆಗೂ ಏನು ಸಂಬಂಧ? ಐಟಿ ಸೆಲ್‌ನಲ್ಲಿ ಮನೋರಂಜನ್ ಕೆಲಸ ಮಾಡುತ್ತಿದ್ದರಾ, ಇಲ್ವಾ? ನಿಮ್ಮ ಗಮನಕ್ಕೆ ಬಾರದೆ ಪಾಸ್ ಹೇಗೆ ಕೊಟ್ಟಿದ್ದಾರೆ? ಅಮಿತ್ ಷಾ ಅವರ ಜತೆಗೆ ಭೇಟಿ ಮಾಡುವ ಅವಕಾಶ ಮಾಡಿಕೊಟ್ಟಿರಲಿಲ್ಲವೇ?

4 ತಿಂಗಳಲ್ಲಿ ಎಷ್ಟು ಬಾರಿ ಭೇಟಿ ಮಾಡಿದ್ದೀರಿ? ಆರ್‌ಎಸ್‌ಎಸ್ ಮುಖಂಡರ ಭೇಟಿ ಮಾಡಿಸಿಲ್ವೇ? ನಿಮ್ಮ ದೆಹಲಿಯಲ್ಲಿರುವ ಸಂಸದರ ನಿವಾಸದಲ್ಲಿ ಇವರು ಉಳಿದುಕೊಂಡಿರಲಿಲ್ವೇ? ಆ ಆರು ಜನರಲ್ಲಿ ದಲಿತರು ಯಾರು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


ಮನೋರಂಜನ್ ಮೈಸೂರಿನಲ್ಲಿ ಹುಟ್ಟಿ ಬೆಳೆದ ವ್ಯಕ್ತಿ. ಇವನು ಸಂಸದ ಪ್ರತಾಪ್ ಸಿಂಹ ಜತೆಗೆ ನಿಕಟ ಸಂಪರ್ಕದಲ್ಲಿದ್ದ. ಸಾಗರ್ ಶರ್ಮ, ಮನೋರಂಜನ್ ಅವರಿಗೆ ಸ್ವತಃ ನಿಮ್ಮ ಹಸ್ತಾಕ್ಷರದಿಂದ ಸಹಿ ಮಾಡಿಕೊಟ್ಟಿರುವ ಪಾಸ್‌ಗಳವು. ಇದರ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ಅವರ ಕಚೇರಿಗಳನ್ನು ಸೀಜ್ ಮಾಡಬೇಕು ಎಂದು ಒತ್ತಾಯಿಸಿದರು.


ಒಂದು ಟ್ವೀಟ್ ಮೂಲಕವಾದರೂ ಪ್ರತಾಪ್ ಸಿಂಹ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ಆದರೆ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ಯಾವಾಗಲೂ ಫೇಸ್‌ಬುಕ್ ಲೈವ್ ಬರ್ತಾ ಇದ್ದ ವ್ಯಕ್ತಿ ಎಲ್ಲಿ ಕಾಣೆಯಾಗಿದ್ದಾರೆ? ಈ ಕೂಡಲೇ ನೀವು ಎಲ್ಲೇ ಇದ್ದರೂ ಘಟನೆ ಕುರಿತು ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.


ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿ ಏನಾದರೂ ಇದ್ದಿದ್ದರೆ ಇಡೀ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಈಗ ಏಕೆ ಪ್ರಕರಣವನ್ನು ಹಳ್ಳ ಹಿಡಿಸಲು ಮುಂದಾಗಿದ್ದಾರೆ? 4 ಹಂತದ ಭದ್ರತಾ ವ್ಯವಸ್ಥೆ ತಪ್ಪಿಸಿಕೊಂಡು ಒಳಗಡೆ ಹೇಗೆ ಹೋದರು? ಸ್ಮೋಕ್ ಡಬ್ಬಿಗಳನ್ನು ಹೇಗೆ ಒಳಭಾಗಕ್ಕೆ ತೆಗೆದುಕೊಂಡು ಹೋದರು? ಅಂತಹ ಅನಾಹುತ ಆದರೂ ಸ್ಥಳಕ್ಕೆ ಒಬ್ಬ ವೈದ್ಯರೂ ಬರಲಿಲ್ಲ. ಇದರ ಅರ್ಥವೆನು? ಇದೆಲ್ಲ ಪೂರ್ವನಿಯೋಜಿತ ಕೃತ್ಯವೇ ಎಂದು ಪ್ರಶ್ನಿಸಿದರು.


ಈ ಕೂಡಲೇ ಪ್ರತಾಪ್ ಸಿಂಹ ಅವರನ್ನು ಸಂಸತ್ ಸ್ಥಾನದಿಂದ ಅಮಾನತು ಮಾಡಬೇಕು. ಇಲ್ಲಿವರೆಗೂ ಎಫ್‌ಐಆರ್ ಏಕೆ ದಾಖಲಾಗಿಲ್ಲ? ಯಾವ ಸೆಕ್ಷನ್ ಹಾಕಿದ್ದೀರಿ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.


ಸಂಸತ್‌ನಲ್ಲಿ ಉಂಟಾಗಿರುವ ಭದ್ರತಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು. ಈ ಪ್ರಕರಣದ ಕುರಿತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.


ಈ ಪ್ರಕರಣವನ್ನು ಬಿಜೆಪಿಯವರು ಲಘುವಾಗಿ ಪರಿಗಣಿಸುತ್ತಿದ್ದಾರೆ. ಇದರ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ. ಘಟನೆ ನಡೆದು 24 ಗಂಟೆಯಾದರೂ ಬಿಜೆಪಿ ನಾಯಕರು ಯಾರೂ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಪ್ರಧಾನಿ ಬಗ್ಗೆ ಮಾತನಾಡಿದರೆಂದು ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ಅಮಾನತು ಮಾಡಿತು. ಟಿಎಂಸಿ ಸಂಸದೆ ಆಗಿದ್ದ ಮಹುವಾ ಮೊಯಿತ್ರಾ ಅವರಿಗೆ ಮಾತನಾಡಲು ಅವಕಾಶ ಕೊಡದೆ ಅಮಾನತು ಮಾಡಲಾಯಿತು. ಆದರೆ ಸಂಸತ್‌ಗೆ ನುಗ್ಗಿದ ಪ್ರಕರಣದಲ್ಲಿ ಮೌನ ವಹಿಸಲಾಗಿದೆ. ಇದಕ್ಕೆ ಕಾರಣವೇನು? ಕಾನೂನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net