ಷಡ್ಯಂತ್ರ ನಡೆಸಿದವರ ವಿರುದ್ಧ ತನಿಖೆಯಾಗಲಿ

New Joshi Press Meet New
Published on

ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪಿತೂರಿ ಮಾಡುವಲ್ಲಿ ಕಾಂಗ್ರೆಸ್​ನ ಮುಖಂಡರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಕೆಲವರ ಷಡ್ಯಂತ್ರ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶುದ್ಧೀಕರಣಗೊಳ್ಳಬೇಕೆಂದರೆ ಷಡ್ಯಂತ್ರ ನಡೆಸಿದವರ ವಿರುದ್ಧ ತನಿಖೆ ನಡೆಸಿ, ಅವರ ಕೃತ್ಯವನ್ನು ಬಹಿರಂಗಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಿತೂರಿ ಬಗ್ಗೆ ಜನಾಕ್ರೋಶ ಹೆಚ್ಚುತ್ತಿದ್ದಂತೆಯೇ ಸರ್ಕಾರ ಸಂಪೂರ್ಣ ಷಡ್ಯಂತ್ರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಶವಗಳ ಹುಡುಕಾಟಕ್ಕಾಗಿ 10-12 ಅಡಿ ತೆಗ್ಗು ತೋಡಿರುವುದು ಹಾಸ್ಯಾಸ್ಪದ. ಯಾವುದೇ ಶವವನ್ನು ಮೇಲೆತ್ತಬೇಕಾದರೆ ನ್ಯಾಯಾಲಯದ ಅನುಮತಿ ಬೇಕೆಂಬ ಕನಿಷ್ಠ ಅರಿವೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.

ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಸುಳ್ಳು ಆರೋಪ ಮಾಡಿದ ಷಡ್ಯಂತ್ರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಕಾಂಗ್ರೆಸ್ ಸರ್ಕಾರ ಹಿಂದುಗಳ ಭಾವನೆಗಳನ್ನು ಕೆಣಕಿದೆ ಎಂದು ದೂರಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ಇನ್ನಿತರರ ಮೇಲೆ ಆರೋಪ ಮಾಡಲಾಗಿದೆ ಎಂಬ ಕಾರಣಕ್ಕೆ ಆರೋಪ ಮಾಡಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆದರೆ, ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಆರೋಪ ಮಾಡಿ, ಅವಾಚ್ಯವಾಗಿ ನಿಂದಿಸಿರುವ ಸಮೀರ, ಗಿರೀಶ ಮಟ್ಟೆಣ್ಣವರ ಸೇರಿದಂತೆ ಇನ್ನಿತರ ವ್ಯಕ್ತಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಹೇಳಿದರು.

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಯಾವುದೇ ಗಲಭೆ ನಡೆಯದಿದ್ದರೂ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಪ್ರಹಾರ ಮಾಡಿರುವ ಪೊಲೀಸರಲ್ಲಿ ಇಬ್ಬರು ಮುಸ್ಲಿಂರಿದ್ದಾರೆ. ಇನ್​ಸ್ಪೆಕ್ಟರ್ ಹಾಗೂ ಇಬ್ಬರು ಪೇದೆಗಳನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಡಿಜೆ ನಿಷೇಧಿಸಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬೆಳಗ್ಗೆ 6 ಗಂಟೆಯೊಳಗೆ ಲೌಡ್​ಸ್ಪೀಕರನ್ನೂ ಹಚ್ಚಬಾರದು. ಆದರೂ, ಮಸೀದಿಗಳಲ್ಲಿ ಬೆಳಗಿನಜಾವ 5 ಗಂಟೆಗೆ ಆಜಾನ್ ಕೂಗಲಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net