ಡೆತ್‌ನೋಟ್ ಅಂಶಗಳ ಸಮಗ್ರ ತನಿಖೆ ನಡೆಯಲಿ

Channabasappa
ಎಸ್.ಎನ್.ಚನ್ನಬಸಪ್ಪ, ಶಾಸಕ
Published on

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಅನಾವರಣಗೊಂಡಿದೆ. ಅಧಿಕಾರಿಯ ಕುಟಂಬಕ್ಕೆ ನ್ಯಾಯ ಒದಗಿಸಬೇಕು. ಅಧಿಕಾರಿ ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ 187.33 ಕೋಟಿ ರೂ.ಗಳನ್ನು ವಿವಿಧ ಇಲಾಖೆ ಖಾತೆಗಳಿಗೆ ವರ್ಗಾವಣೆ ಮಾಡಲು ಹಿರಿಯ ಅಧಿಕಾರಿಗಳಿಂದ ಮೌಖಿಕ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ವಿವಿಧ ಇಲಾಖೆಗಳಿಗೆ 177.35 ಕೋಟಿ ರೂ. ವರ್ಗಾವಣೆ ಮಾಡಬೇಕಾಯಿತು. ಇದಕ್ಕೆ ಸಚಿವರೊಬ್ಬರಿಂದ ಮೌಖಿಕ ಆದೇಶ ಬಂದಿತ್ತು ಎಂದು ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಗಂಭೀರ ಸಂಗತಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಸಚಿವರು ಎಂದರೆ ಬಿ.ನಾಗೇಂದ್ರ ಎಂಬುದು ಸ್ಪಷ್ಟ. ಅವರ ಹೆಸರನ್ನು ನೇರವಾಗಿ ಬರೆಯದಿದ್ದರೂ ಇಲಾಖೆಗೆ ಸಂಬಂಧಿಸಿದ ಸಚಿವರು ಅವರೇ ಆಗಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಎನ್.ಜೆ.ರಾಜಶೇಖರ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ಜಗದೀಶ್, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net