ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬಿಕ್ಕೋಡಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಬೈಕ್, ಆಟೋ ರ‌್ಯಾಲಿಗೆ ಚಾಲನೆ ನೀಡುತ್ತಿರುವ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಇತರರು.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬಿಕ್ಕೋಡಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಬೈಕ್, ಆಟೋ ರ‌್ಯಾಲಿಗೆ ಚಾಲನೆ ನೀಡುತ್ತಿರುವ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಇತರರು.
Published on

ಬೇಲೂರು: ಹಾಸನ ಜಿಲ್ಲೆಯಲ್ಲಿನ ಕಾಡಾನೆಗಳ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜಯ ಕನಾಟಕ ಸಂಘಟನೆ ನೇತೃತ್ವದಲ್ಲಿ ಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿ ಬೈಕ್ ಹಾಗೂ ಆಟೋ ರ‌್ಯಾಲಿಗೆ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಮಂಗಳವಾರ ಚಾಲನೆ ನೀಡಿದರು.

ನಂತರ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತ ಸಂಘ, ಕಾಫಿ ಬೆಳೆಗಾರರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಸಹಭಾಗಿತ್ವದಲ್ಲಿ ಹಾಸನದ ಹೇಮಾವತಿ ಪ್ರತಿಮೆ ಬಳಿ ಹಮ್ಮಿಕೊಂಡಿರುವ ಧರಣಿಗೆ ಬೈಕ್, ಆಟೋ ರ‌್ಯಾಲಿಯಲ್ಲಿ ತೆರಳಿದರು.

ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ, ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಕಾಡಾನೆ ಉಪಟಳಗಳ ಬಗ್ಗೆ ಮಾತನಾಡಿ, ಸಮಸ್ಯೆ ಬಗೆಹರಿಸದಿದ್ದರೆ, ಜಯ ಕರ್ನಾಟಕ ಸಂಘಟನೆಯಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರ ತಾಲೂಕಿನಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಕಾಡಾನೆಗಳ ಉಪಟಳ ಹೇಳತೀರದಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಹಾಸನ ಜಿಲ್ಲೆಯವರು ಎರಡು ಜನ ಮುಖ್ಯಮಂತ್ರಿಗಳು, ಒಬ್ಬರು ಪ್ರಧಾನಿಯಾದರೂ ಹಲವು ಜನ ಸಚಿವರಾದರೂ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ವಿಫಲರಾಗಿದ್ದಾರೆ. ಕಾಡಾನೆಗಳಿಂದ ಪ್ರಾಣ ಹಾನಿಯಾದ ಕುಟುಂಬದವರು, ಬೆಳೆ ಹಾನಿಯಾದ ರೈತರು, ಸರ್ಕಾರಕ್ಕೆ ಭಿಕ್ಷೆ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರು, ಕಾಫಿ ಬೆಳೆಗಾರರು, ಸಂಘಟನೆಯವರು ಪ್ರತಿಭಟನೆ ನಡೆಸಿದಾಗ ಆ ಕ್ಷಣಕ್ಕೆ ಸಮಾಧಾನಕಾರ ಉತ್ತರ ಕೊಡುತ್ತಿದ್ದಾರೆಯೇ ಹೊರತು, ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದು, ಇದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಬೇಲೂರು ತಾಲೂಕಿನ ಬಿಕ್ಕೋಡಿನಿಂದ ಹಾಸನಕ್ಕೆ ರ‌್ಯಾಲಿ ಹೊರಟಿದ್ದೇವೆ. ಸರ್ಕಾರ ಇದಕ್ಕೂ ಬಗ್ಗದಿದ್ದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜನರಿಗೆ ಜಾಗೃತಿ ಮೂಡಿಸಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕಾನೂನು ಕಾಯ್ದೆಗೆ ತಿದ್ದುಪಡಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ. ಜಿಲ್ಲೆಯಲ್ಲಿ ಕಾಡಾನೆಗಳು ನಿರಂತರವಾಗಿ ಬೆಳೆ ನಾಶ, ಜೀವಹಾನಿ ಮಾಡಿದಾಗ ಅರಣ್ಯಾಧಿಕಾರಿಗಳು ಬರುತ್ತಾರೆ, ನಾವು ಅವರ ಮೇಲೆ ರೇಗಾಡುತ್ತೇವೆ, ಶಾಸಕ, ಸಂಸದದರು ಬಂದು ಸಮಾಧಾನಪಡಿಸಿ ಶವಸಂಸ್ಕಾರ ಮಾಡುವುದು ನಡೆಯುತ್ತಿದೆ. ಈಗಿನ ಕಾಡಾನೆಗಳ ಸಮಸ್ಯೆಯನ್ನು ಸರ್ಕಾರ ಶೀಘ್ರವೇ ಬಗೆಹರಿಸದಿದ್ದರೆ ಬೇಲೂರು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ಸರ್ಕಾರ ಕಾಡಾನೆಗಳನ್ನು ಸ್ಥಳಾಂತರ ಮಾಡದೆ, ರೇಡಿಯೋ ಕಾಲರ್ ಅಳವಡಿಸಿ ರೈತರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನನೀಡಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಕಾಡನೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು, ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೇಸತ್ತು ಹೋಗಿದ್ದು, ಜೀವಭಯದಲ್ಲಿ ಬದುಕುತ್ತಿದ್ದಾರೆ ಎಂದರು.

ಜಯ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಉಪಾಧ್ಯಕ್ಷ ಮುನಿಸ್ವಾಮಿ, ಪ್ರದಾನ ಕಾರ್ಯದರ್ಶಿ ಗಂಗನ್ ರಾಜ್, ಸಂಘಟನಾ ಕಾರ್ಯದರ್ಶಿ ದಿವ್ಯಾ, ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್, ಮಾಜಿ ಅಧ್ಯಕ್ಷ ಗೋವಿಂದಶೆಟ್ಟಿ, ಕಾರ್ಯದರ್ಶಿ ಕೌರಿ ಸಂಜಯ್, ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ರೇಣುಕಣ್ಣ, ಜಯಕ ರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಜಿಲ್ಲಾ ಉಪಾಧ್ಯಕ್ಷ ಶ್ರೇಯಸ್, ತಾಲೂಕು ಕಾರ್ಯಧ್ಯಕ್ಷ ಲಕ್ಷ್ಮಣ್, ಕಾರ್ಯದರ್ಶಿ ಮಂಜುನಾಥ್, ಗೌರವಾಧ್ಯಕ್ಷ ಅರುಣ್ ಕುಮಾರ್, ಹೋಬಳಿ ಅಧ್ಯಕ್ಷರಾದ ಅಬ್ದುಲ್ ರಜಾಕ್, ಮಲ್ಲಿಕಾರ್ಜುನ್, ಜಯಣ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net