

ಹುಬ್ಬಳ್ಳಿ : ಅಸ್ಪಷ್ಯತೆ ನಿವಾರಣೆಗಾಗಿ ಸವರ್ಣೀಯರ ಮಧ್ಯೆ ಚಳವಳಿ ನಡೆಯಬೇಕು. ಜಾತಿ, ಅಸ್ಪಷ್ಯತೆ ಮೇಲೆ ನಿಂತಿರುವ ಸಮಾಜದಿಂದ ಸುಭದ್ರ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ ? ಈ ಪರಿಸ್ಥಿತಿಯನ್ನು ಶತ್ರು ರಾಷ್ಟ್ರಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಂದು ಮಾಜಿ ಸಚಿವ ಎನ್. ಮಹೇಶ ಕಳವಳ ವ್ಯಕ್ತಪಡಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜನ್ಮದಿನದ ಅಂಗವಾಗಿ ಲೋಕಹಿತ ಟ್ರಸ್ಟ್, ಸಾಮರಸ್ಯ ವೇದಿಕೆ ಮತ್ತು ಸದ್ಭಾವ ವೇದಿಕೆ ಸಹಯೋಗದಲ್ಲಿ ಇಲ್ಲಿನ ಗೋಕುಲ ರಸ್ತೆಯ ಕೇಶವ ಕುಂಜದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಸ್ಪಷ್ಯತೆಯ ಆಚರಣೆ, ಜಾತಿ ಪದ್ಧತಿಯ ರೋಗ ಸವರ್ಣೀಯರಿಗೆ ಬಂದಿದೆ. ಆದರೆ, ಚಿಕಿತ್ಸೆ ನೀಡುತ್ತಿರುವುದು ಮಾತ್ರ ಅಸ್ಪಷ್ಯರಿಗೆಯೆಂದು ಡಾ. ಬಿ.ಆರ್. ಅಂಬೇಡ್ಕರ ಅವರೇ ಕಳವಳಪಟ್ಟಿದ್ದರು ಎಂದರು.</p><p>ಮಠಾಧಿಪತಿಗಳು ಮಾದಿಗ ಸಮುದಾಯದವರಿಗೆ ಮಠ, ದೇವಸ್ಥಾನಗಳಿಗೆ ಪ್ರವೇಶ ಕೊಡಿಸುವ ಮೂಲಕ ಅಸ್ಪಷ್ಯತೆ ನಿವಾರಣೆಯ ಚಳವಳಿ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಭಾರತವನ್ನು 2047ಕ್ಕೆ ವಿಶ್ವದ ನಂ. 1 ದೇಶವನ್ನಾಗಿಸುವ ಕನಸು ಪ್ರಧಾನಿ ನರೇಂದ್ರ ಮೋದಿ ಅವರದ್ದು. ನಾವೆಲ್ಲ ಆರ್ಥಿಕತೆ ಜತೆಗೆ ಸಾಮಾಜಿಕವಾಗಿಯೂ ಸಬಲರಾಗಬೇಕಾಗಿದೆ. ಇದ್ಕಕಾಗಿ ಸಹೋದರತ್ವದ ಸಾಮರಸ್ಯ ಸೃಷ್ಟಿಯಾಗಬೇಕು. ಈ ಪ್ರಕ್ರಿಯೆ ಈಗಿನಿಂದಲೇ ಪ್ರಾರಂಭಗೊಳ್ಳಬೇಕು ಎಂದು ಹೇಳಿದರು.
ಸಹೋದರತ್ವ ನಿರ್ವಣವಾಗದೇ ಜಾತಿಗಳ ಮಧ್ಯೆ ಅಸಮಾಧಾನಗಳು ಉಂಟಾದರೆ ದೇಶ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾದೀತೆಂಬ ಆತಂಕ ಡಾ. ಅಂಬೇಡ್ಕರ ಅವರನ್ನು ಕಾಡುತ್ತಿತ್ತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ, ಇಂದಿನ ಆಧುನಿಕ ದಿನಗಳಲ್ಲಿ ಹಲವಾರು ದೇಶಗಳು ಮಹಿಳೆಯರಿಗೆ, ಕೆಳ ಜಾತಿಯವರಿಗೆ ಗೌರವ ಕೊಡುತ್ತಿಲ್ಲ. ಆದರೆ, ಭಾರತದಲ್ಲಿ ಡಾ. ಅಂಬೇಡ್ಕರ ಅವರ ಕಾರಣದಿಂದಾಗಿ ಈ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಜಾತಿ, ವರ್ಗ ರಹಿತ ಸಮಾಜ ನಿರ್ಮಾಣ ಮಾಡಲಿಚ್ಛಿಸುವವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಬರಬೇಕು. ಹಿಂದು ಸಮಾಜದಲ್ಲಿ ಇರುವ ಜಾತಿಬೇಧವನ್ನು ಸಂಘ ದೂರ ಮಾಡಲು ಯತ್ನಿಸುತ್ತಿದೆ. ಆದರೆ, ಕೆಲವರು ಈ ರೀತಿಯ ಯಾವುದೇ ಪ್ರಯತ್ನವನ್ನೂ ಮಾಡದೇ ಸಂಘವನ್ನೇ ದೂಷಿಸುತ್ತಿದ್ದಾರೆ ಎಂದರು.
ದಲಿತ ಮತ್ತು ಬಲಿತರ ನಡುವಿನ ಭಿನ್ನಾಭಿಪ್ರಾಯವನ್ನು ದೂರ ಮಾಡಬೇಕಾಗಿದೆ. ಡಾ. ಅಂಬೇಡ್ಕರ ಅವರು ಸಹ ಇದನ್ನೇ ಪ್ರತಿಪಾದಿಸಿದ್ದರು. ಡಾ. ಅಂಬೇಡ್ಕರ ಅವರು ಯಾವುದೇ ಒಂದು ಸಮುದಾಯಕ್ಕೆ ಸೇರಿದ ನಾಯಕರಲ್ಲ. ಅವರೊಬ್ಬ ರಾಷ್ಟ್ರ ನಾಯಕ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಸುಭಾಷಸಿಂಗ್ ಜಮಾದಾರ ಸ್ವಾಗತಿಸಿ, ಪರಿಚಯಿಸಿದರು. ಶ್ರೀಧರ ನಾಡಿಗೇರ, ಮಹಾದೇವ ಕರಮರಿ, ಈರಣ್ಣ ಶಿರಸಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಹಾಗೂ ಇತರರು ಇದ್ದರು.