

ಶಿರಸಿ: ಓದು ಎಲ್ಲರ ತೆಕ್ಕೆಗೆ ಸಿಗುವಂತಾಗಬೇಕು. ಕನ್ನಡ ಭಾಷೆ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಆಗಬೇಕಿದೆ ಎಂದು ವಾಗ್ಮಿ, ನಿರ್ದೇಶಕ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಅವರ ಕಾದಂಬರಿ ‘ಕರ್ಮಫಲ’ ವನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೃತಿಕಾರ ಸಾಹಿತ್ಯ ಸೃಷ್ಟಿಗೆ ತನ್ಮಯರಾಗಬೇಕು. ಕೃತಿಕಾರರ ಕೃತಿಗಳ ಮೂಲಕ ಸಮಷ್ಟಿ ಪ್ರಜ್ಞೆಯ ಸಾಹಿತ್ಯ ರಚಿಸಬೇಕು. ಈ ಕಾದಂಬರಿ ಬಾಲ್ಯದ ನೆನಪಿನ ಚೌಕಟ್ಟಿನಲ್ಲಿ ದಾಖಲಾಗುತ್ತಿದೆ. ಈ ನೆಲದ ಸತ್ವ ದಾಖಲಾದರೆ ಮುಂದಿನ ತಲೆಮಾರಿಗೆ ದಾಖಲಿಸಲು ಸಾಧ್ಯವಿದೆ ಎಂದರು.
ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಇಡೀ ಕಾದಂಬರಿ ಕರ್ಮಫಲ ಹೇಳುತ್ತದೆ. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದು ನಮ್ಮ ಸಿದ್ಧಾಂತ. ಈ ಕಾದಂಬರಿ ನಮ್ಮ ಬಾಲ್ಯವನ್ನು ನೆನಪಿಸುತ್ತದೆ ಎಂದರು.
ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ಹವಿಗನ್ನಡದ ಬಳಕೆಯ ಕಾದಂಬರಿ ಸೃಷ್ಟಿಯಾಗಿದೆ. ವ್ಯಥೆ-ಕಥೆಯಾದದ್ದು ಮಹಾಭಾರತ, ಶೋಕ ಶ್ಲೋಕ ಆದದ್ದು ರಾಮಾಯಣ. ಹಾಗೇ ‘ಕರ್ಮಫಲ’ ಶರಾವತಿ ಬದುಕಿನ ಕಥಾವರಣ ಆಗಿದೆ. ‘ಕರ್ಮಫಲ’ ನಮ್ಮ ನಮ್ಮ ಬದುಕಿನಲ್ಲಿ ಫಲ ನಿರ್ವಹಿಸುತ್ತದೆ. ಈ ಕಾದಂಬರಿ ಕಥೆಯಲ್ಲ, ಮನುಷ್ಯ ಜೀವಿತದ ಕಥನ. ಪ್ರೇಮ, ಕ್ರೌರ್ಯ ನಡುವಿನ ಕಾದಂಬರಿ ಸಾಗುತ್ತದೆ ಎಂದರು.
ಕಾದಂಬರಿಕಾರ ಸತೀಶ ಹೆಗಡೆ, ಪ್ರಕಾಶಕಿ ಸವಿತಾ ಯಾಜಿ, ಕುಮಾರ ವಾಸನ್, ರಾಘವೇಂದ್ರ ಬೆಟ್ಟಕೊಪ್ಪ, ಇತರರಿದ್ದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಬಿ.ಪಿ. ಸತೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.